ಜಕಾರ್ತಾ: ಜಕಾರ್ತಾದಿಂದ ಪಶ್ಚಿಮ ಕಾಲಿಮಂತನ್ ಪ್ರಾಂತ್ಯದ ಪೊಂಟಿಯಾನಕ್ ಕಡೆಗೆ ಹೊರಟಿದ್ದ 62 ಪ್ರಯಾಣಿಕರನ್ನು ಹೊತ್ತ ಶ್ರೀವಿಜಯ ಏರ್ ವಿಮಾನ ಸಮುದ್ರಕ್ಕೆ ಅಪ್ಪಳಿಸಿತ್ತು. ಈ ವಿಮಾನದ ಕೆಲ ಅವಶೇಷಗಳು ಲಭಿಸಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಆದರೆ ವಿಮಾನದ ಎರಡು ಬ್ಲ್ಯಾಕ್ ಬಾಕ್ಸ್ಗಳಿಗಾಗಿ ಹುಡುಕಾಟ ತೀವ್ರಗೊಂಡಿದ್ದು, ಬಾಕ್ಸ್ ದೊರಕಿದ್ದಲ್ಲಿ ವಿಮಾನ ಪತನಕ್ಕೆ ಕಾರಣ ತಿಳಿಯಲಿದೆ.
ಇಂಡೋನೇಷ್ಯಾದ ರಾಜಧಾನಿ ಜಕಾರ್ತಾದಲ್ಲಿ ಶನಿವಾರದಂದು ಭಾರಿ ಮಳೆಯ ಮಧ್ಯೆ ಬೋಯಿಂಗ್ 737-500 ಜೆಟ್ ಕಣ್ಮರೆಯಾಗಿತ್ತು. ಇದುವರೆಗಿನ ಶೋಧ ಕಾರ್ಯದಲ್ಲಿ ವಿಮಾನದ ಭಾಗಗಳು ಮಾತ್ರ ಪತ್ತೆಯಾಗಿವೆ, ವಿನಃ ಮಾನವ ದೇಹದ ಭಾಗಗಳು ಪತ್ತೆಯಾಗಿಲ್ಲ. ಜಕಾರ್ತಾ ಕರಾವಳಿಯ ಉತ್ತರಕ್ಕೆ ಸಾವಿರ ದ್ವೀಪ ಸರಪಳಿಯಲ್ಲಿ ಲಂಕಾಂಗ್ ಮತ್ತು ಲಕಿ ದ್ವೀಪಗಳ ನಡುವೆ ಡಿಜಿಟಲ್ ಕಾಕ್‌ಪಿಟ್ ವಾಯ್ಸ್ ರೆಕಾರ್ಡರ್ ಮತ್ತು ಫ್ಲೈಟ್ ಡಾಟಾ ರೆಕಾರ್ಡರ್‌ಗಳನ್ನು ಹೊಂದಿರುವ ಬಾಕ್ಸ್ಗಳಿಂದ ಸಿಗ್ನಲ್‌ಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಇದನ್ನು ಓದಿ: ಇಂಡೋನೇಷ್ಯಾದಲ್ಲೇಕೆ ವಿಮಾನ ದುರಂತ? ಪ್ರಮುಖ ಹಿಂದಿನ ಅಪಘಾತಗಳಾವುವು?: ಇಲ್ಲಿದೆ ಸಂಪೂರ್ಣ ಮಾಹಿತಿ
ವಿಮಾನ ಸಮುದ್ರಕ್ಕೆ ಅಪ್ಪಳಿಸುವ ವೇಳೆಯಲ್ಲಿ ಬ್ಲ್ಯಾಕ್ ಬಾಕ್ಸ್ ವಿಮಾನದಿಂದ ಬೇರ್ಪಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು ಡಿಜಿಟಲ್ ಕಾಕ್‌ಪಿಟ್ ವಾಯ್ಸ್ ರೆಕಾರ್ಡರ್ ಮತ್ತು ಫ್ಲೈಟ್ ಡಾಟಾ ರೆಕಾರ್ಡರ್ ಎಂಬ ಬ್ಲ್ಯಾಕ್ ಬಾಕ್ಸ್ಗಳ ಮೂಲಕ ದುರಂತಕ್ಕೂ ಮುನ್ನ ಪೈಲಟ್ ಹಾಗೂ ಕಂಟ್ರೋಲ್ ರೂಂ ಸಿಬ್ಬಂದಿ ನಡುವೆ ನಡೆದ ಸಂಭಾಷಣೆಯನ್ನು ಟ್ರೇಸ್ ಮಾಡಬಹುದಾಗಿದೆ. ಇವೆರಡು ಸಾಧನಗಳು ಪತ್ತೆಯಾದ ಬಳಿಕ ಅವುಗಳನ್ನು ದುರಂತದ ತನಿಖೆಯ ಮೇಲ್ವಿಚಾರಣೆಯ ರಾಷ್ಟ್ರೀಯ ಸಾರಿಗೆ ಸುರಕ್ಷತಾ ಸಮಿತಿಗೆ ಹಸ್ತಾಂತರಿಸಲಾಗುತ್ತದೆ.
ಭಾನುವಾರದಿಂದ 20ಕ್ಕೂ ಹೆಚ್ಚು ಹೆಲಿಕಾಪ್ಟರ್‌ಗಳು, 100 ನೌಕಾಪಡೆಯ ಹಡಗುಗಳು ಮತ್ತು ದೋಣಿಗಳು, 2,500 ರಕ್ಷಣಾ ಸಿಬ್ಬಂದಿಗಳು ಶೋಧ ಕಾರ್ಯ ನಡೆಸುತ್ತಿದ್ದು, ವಿಮಾನದ ಭಾಗಗಳನ್ನು 23 ಮೀಟರ್ ಆಳದಲ್ಲಿ ನೀರಿನಲ್ಲಿ ಪತ್ತೆ ಹಚ್ಚಿದ್ದಾರೆ.