ಬೀಜಿಂಗ್: ಪೂರ್ವ ಲಡಾಖ್‌ನಲ್ಲಿನ ಗಡಿ ಉದ್ವಿಗ್ನತೆಯ ಮಧ್ಯೆ ಭಾರತದ ಕಡೆಯಿಂದ 'ದ್ವಿಪಕ್ಷೀಯ ಒಪ್ಪಂದ ಮತ್ತು ಪ್ರಮುಖ ಒಮ್ಮತ' ಉಲ್ಲಂಘಿಸಲಾಗಿದೆ ಎಂದು ಚೀನಾ ಆರೋಪಿಸಿದೆ.
ಚೀನಾದ ಮಿಲಿಟರಿ ಪೂರ್ವಭಾವಿಯಾಗಿ ಈ ಕೃತ್ಯ ಎಸಗಿದೆ ಎಂದು ಭಾರತ ಹೇಳುತ್ತಿದೆ. ಭಾರತದ ಪಡೆಗಳು ಕಾನೂನು ಬಾಹಿರವಾಗಿ ಎಲ್‌ಎಸಿಯನ್ನು ದಾಟಿವೆ. ಗಡಿ ಪ್ರದೇಶಗಳಲ್ಲಿ ಯಥಾಸ್ಥಿತಿಯನ್ನು ಬದಲಾಯಿಸಿವೆ. ದ್ವಿಪಕ್ಷೀಯ ಒಪ್ಪಂದ ಮತ್ತು ಪ್ರಮುಖ ಒಮ್ಮತವನ್ನು ಉಲ್ಲಂಘಿಸಿವೆ ಎಂಬ ಅಂಶವನ್ನು ಭಾರತದ ಹೇಳಿಕೆಗಳು ಬಹಿರಂಗಪಡಿಸುತ್ತವೆ ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರರು ಆರೋಪಿಸಿದ್ದಾರೆ.
'ಭಾರತದ ಸೈನಿಕರನ್ನು ಕಟ್ಟುನಿಟ್ಟಾಗಿ ಶಿಸ್ತುಬದ್ಧಗೊಳಿಸಲು, ಎಲ್ಲಾ ಪ್ರಚೋದನೆಗಳನ್ನು ನಿಲ್ಲಿಸಲು, ಎಲ್‌ಎಸಿಯಲ್ಲಿ ಅಕ್ರಮವಾಗಿ ಅತಿಕ್ರಮಣ ಮಾಡಿದ ಎಲ್ಲಾ ಸಿಬ್ಬಂದಿಯನ್ನು ತಕ್ಷಣ ಹಿಂತೆಗೆದುಕೊಳ್ಳಬೇಕು. ಉದ್ವಿಗ್ನತೆ ಹೆಚ್ಚಿಸುವ ಅಥವಾ ವಿಷಯಗಳನ್ನು ಸಂಕೀರ್ಣಗೊಳಿಸುವ ಯಾವುದೇ ಕ್ರಮಗಳನ್ನು ನಿಲ್ಲಿಸುವಂತೆ ನಾವು ಒತ್ತಾಯಿಸುತ್ತೇವೆ' ಎಂದು ವಕ್ತಾರರು ಹೇಳಿದ್ದಾರೆ.
ಆಗಸ್ಟ್ 29 ಮತ್ತು 30ರ ರಾತ್ರಿ ಚೀನಾದ ಸೈನ್ಯವು ಪಾಂಗೊಂಗ್ ತ್ಸೋ ದಕ್ಷಿಣದ ದಂಡೆ ಬಳಿಯ ಪ್ರದೇಶಗಳಿಗೆ ಅತಿಕ್ರಮಣ ಮಾಡಿದ ಪ್ರಯತ್ನವನ್ನು ಭಾರತೀಯ ಸೇನೆ ವಿಫಲಗೊಳಿಸಿತ್ತು.