ಕಾಬೂಲ್(ಅಫ್ಘಾನಿಸ್ತಾನ): ಮೇ 4 ರಂದು, ಅಮೆರಿಕ ತನ್ನ ಸೇನಾಪಡೆಗಳನ್ನು ಹಿಂತೆಗೆದುಕೊಂಡ ನಂತರ ತಾಲಿಬಾನ್ ಮೊದಲ ದಾಳಿ ನಡೆಸಿತು. ಅದರ ನಂತರ, ಈಗ ಆಗಸ್ಟ್ 15ರಂದು, ಅಂದರೆ 103 ದಿನಗಳಲ್ಲಿ ತಾಲಿಬಾನ್ ಅಫ್ಘಾನ್ ಸರ್ಕಾರವನ್ನು ಕೆಳಗಿಳಿಸುವಲ್ಲಿ ಯಶಸ್ವಿಯಾಗಿದೆ.
103 ದಿನಗಳಲ್ಲಿ ತಾಲಿಬಾನಿಗಳ ಅಟ್ಟಹಾಸ:
- ಏಪ್ರಿಲ್ 14 - ಯುಎಸ್ ಅಧ್ಯಕ್ಷ ಜೋ ಬೈಡನ್ ಅವರಿಂದ ಅಫ್ಘಾನಿಸ್ತಾನದಿಂದ ತಮ್ಮ ಸೈನ್ಯವನ್ನು ಹಿಂತೆಗೆದುಕೊಳ್ಳುವ ಘೋಷಣೆ. ಮೇ 1 ಮತ್ತು ಸೆಪ್ಟೆಂಬರ್ 11 ರ ನಡುವೆ ಸೈನ್ಯವನ್ನು ಸಂಪೂರ್ಣವಾಗಿ ಹಿಂತೆಗೆದುಕೊಳ್ಳಲು ನಿರ್ಧಾರ.
- ಮೇ 4 - ಮೇ 1 ರಿಂದ ಯುಎಸ್ ಸೇನಾ ಪಡೆಗಳನ್ನು ಹಿಂತೆಗೆದುಕೊಳ್ಳಲು ಆರಂಭಿಸಿದ ತಕ್ಷಣ ತಾಲಿಬಾನ್ ಅಟ್ಟಹಾಸ ಇನ್ನಷ್ಟು ಮೆರೆಯಲು ಮುಂದಾಯಿತು. ಹೆಲ್ಮಾಂಡ್ ಜೊತೆಗೆ ದೇಶದ 6 ಇತರ ಪ್ರಾಂತ್ಯಗಳ ಮೇಲೆ ಉಗ್ರರು ದಾಳಿ ನಡೆಸಿದರು.
- ಮೇ 11 - ರಾಜಧಾನಿ ಕಾಬೂಲ್ ಸಮೀಪದ ನೆರಖ್ ಜಿಲ್ಲೆಯನ್ನು ತಾಲಿಬಾನ್ ವಶಪಡಿಸಿಕೊಂಡಿತು. ಇದರ ನಂತರ ಹಿಂಸಾತ್ಮಕ ಘಟನೆಗಳ ವರದಿಗಳು ದೇಶದೆಲ್ಲೆಡೆಯಿಂದ ಬರಲಾರಂಭಿಸಿದವು.
- ಜೂನ್ 7 - ಜೂನ್‌ನಲ್ಲಿ, ಅಫ್ಘಾನ್ ಸೇನೆಯು ತಾಲಿಬಾನ್ಗೆ ಸ್ಪರ್ಧೆ ನೀಡುತ್ತಿತ್ತು. ಆದರೆ ಅದು ತನ್ನ ಶಕ್ತಿ ತೋರಿಸುತ್ತಿರಲಿಲ್ಲ. ಹಿಂಸೆಯು ಬರಬರುತ್ತ ಯುದ್ಧದ ಸ್ವರೂಪ ಪಡೆದುಕೊಂಡಿತು. ಜೂನ್ 7 ರಂದು, ಅಫ್ಘಾನ್ ಸರ್ಕಾರ ಕಳೆದ 24 ಗಂಟೆಗಳಲ್ಲಿ 150 ಅಫ್ಘಾನ್ ಸೈನಿಕರನ್ನು ಕೊಂದಿರುವುದಾಗಿ ಹೇಳಿದೆ. ಆ ಹೊತ್ತಿಗೆ, 34 ರಲ್ಲಿ 26 ಅಫ್ಘಾನ್ ಪ್ರಾಂತ್ಯಗಳು ಯುದ್ಧದ ಬೆಂಕಿಯಲ್ಲಿ ಉರಿಯುತ್ತಿದ್ದವು.
- ಜೂನ್ 22- ಇಲ್ಲಿಯವರೆಗೆ ದಕ್ಷಿಣ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಅನ್ನು ಪ್ರಬಲವೆಂದು ಪರಿಗಣಿಸಲಾಗಿತ್ತು. ಆದರೆ ಜೂನ್ ಅಂತ್ಯದಲ್ಲಿ ತಾಲಿಬಾನ್ ಹೋರಾಟಗಾರರು ದೇಶದ ಉತ್ತರ ಭಾಗದಲ್ಲಿ ದಾಳಿ ಆರಂಭಿಸಿದರು. ಅಲ್ಲಿಯವರೆಗೆ 370 ರಲ್ಲಿ 50 ಜಿಲ್ಲೆಗಳು ತಾಲಿಬಾನ್ ನಿಯಂತ್ರಣದಲ್ಲಿದ್ದವು.
- ಜುಲೈ 2 - ಈ ಹೊತ್ತಿಗೆ, ಅಮೆರಿಕದ ಸೈನಿಕರು ಸ್ವಲ್ಪಮಟ್ಟಿನ ಹೋರಾಟದಲ್ಲಿದ್ದರು. ಆದರೆ ಜುಲೈ 2 ರಂದು, ಯುಎಸ್ ಸೈನ್ಯವು ಸದ್ದಿಲ್ಲದೆ ಬಾಗ್ರಾಮ್ ವಾಯುನೆಲೆಯನ್ನು ಸ್ಥಳಾಂತರಿಸಿತು. ಈ ಕಾರಣದಿಂದಾಗಿ ಯುದ್ಧದಲ್ಲಿ ಅವರ ಸೈನಿಕರ ಪಾತ್ರವು ಅತ್ಯಲ್ಪವಾಗಿತ್ತು.
- ಜುಲೈ 5 - ಅಫ್ಘಾನ್ ಸರ್ಕಾರದೊಂದಿಗೆ ಮಾತುಕತೆ ನಡೆಸಲು ಬಯಸಿದೆ ಮತ್ತು ಆಗಸ್ಟ್ ವೇಳೆಗೆ ಲಿಖಿತ ಪ್ರಸ್ತಾವನೆಯನ್ನು ನೀಡಲಾಗುವುದು ಎಂದು ತಾಲಿಬಾನ್ ಹೇಳಿತು.
- ಜುಲೈ 21 - ಈ ವೇಳೆಗೆ ದೇಶದ ಒಟ್ಟು 370 ಜಿಲ್ಲೆಗಳಲ್ಲಿ ಅರ್ಧದಷ್ಟು ತಾಲಿಬಾನ್ ನಿಯಂತ್ರಣಕ್ಕೆ ಬಂತು. ಏತನ್ಮಧ್ಯೆ, ಯುಎಸ್ ಅಫ್ಘಾನಿಸ್ತಾನದಿಂದ ಸೈನ್ಯವನ್ನು ಸ್ಥಳಾಂತರಿಸುವುದನ್ನು ಮುಂದುವರೆಸಿತು. ಆದರೆ ಅಫ್ಘಾನ್ ಸರ್ಕಾರಕ್ಕೆ ವಾಯು ಬೆಂಬಲವನ್ನು ನೀಡುತ್ತಲೇ ಇತ್ತು. ಇದರಲ್ಲಿ, ತಾಲಿಬಾನ್ ನೆಲೆಗಳ ಮೇಲೆ ವೈಮಾನಿಕ ದಾಳಿಗಳನ್ನು ಮಾಡಲಾಯಿತು.
- 26 ಜುಲೈ - ಈ ದಿನ ವಿಶ್ವಸಂಸ್ಥೆಯಿಂದ ಆತಂಕಕಾರಿ ಹೇಳಿಕೆ ಬಂದಿತು. ಮೇ ಮತ್ತು ಜೂನ್‌ನಲ್ಲಿ ಈ ಹಿಂಸಾಚಾರದಲ್ಲಿ 2,400 ಕ್ಕೂ ಹೆಚ್ಚು ಅಫ್ಘಾನ್ ಜನರು ಸಾವನ್ನಪ್ಪಿದ್ದಾರೆ ಅಥವಾ ಗಾಯಗೊಂಡಿದ್ದಾರೆ ಎಂದು ಅದು ಹೇಳಿದೆ. ಇದು 2009 ರ ನಂತರದ ಇದು ಅತಿದೊಡ್ಡ ಅಂಕಿ ಅಂಶವಾಗಿದೆ.
- ಆಗಸ್ಟ್ 6 - ಈ ದಿನದಂದು ತಾಲಿಬಾನ್ ದೇಶದ ಮೊದಲ ಪ್ರಾಂತೀಯ ರಾಜಧಾನಿಯಾಗಿ ಜರಂಜ್ ಅನ್ನು ವಶಪಡಿಸಿಕೊಂಡಿತು. ನಂತರದ ಗುರಿ ಕುಂಡುಜ್‌ನದ್ದಾಗಿತ್ತು.
- ಆಗಸ್ಟ್ 13 - ತಾಲಿಬಾನ್ ಒಂದೇ ದಿನದಲ್ಲಿ 4 ಪ್ರಾಂತೀಯ ರಾಜಧಾನಿಗಳನ್ನು ವಶಪಡಿಸಿಕೊಂಡಿತು. ಇದು ಕಂದಹಾರ್ ಮತ್ತು ಹೆರಾತ್ ಅನ್ನು ಒಳಗೊಂಡಿತ್ತು. ಮೊಹಮ್ಮದ್ ಇಸ್ಮಾಯಿಲ್ ಖಾನ್‌ನನ್ನು ಹೆರಾತ್ ಆಕ್ರಮಣದ ನಂತರ ತಾಲಿಬಾನ್ ಬಂಧಿಸಿತು. ಅವರು ಮಾಜಿ ಕಮಾಂಡರ್ ಆಗಿದ್ದರು ಮತ್ತು ತಾಲಿಬಾನ್ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದರು.
- ಆಗಸ್ಟ್ 14 - ಲೋಗರ್ ಪ್ರಾಂತ್ಯದ ರಾಜಧಾನಿ ಪುಲ್-ಎ-ಆಲಂನ ಉತ್ತರ ನಗರವಾದ ಮಜರ್-ಇ-ಶರೀಫ್ ಅನ್ನು ತಾಲಿಬಾನ್ ವಶಪಡಿಸಿಕೊಂಡಿದೆ. ನಂತರ ಭಯೋತ್ಪಾದಕ ಸಂಘಟನೆಯು ಪೂರ್ವದಲ್ಲಿ ಜಲಾಲಾಬಾದ್ ನಗರವನ್ನು ವಶಪಡಿಸಿಕೊಂಡಿತು. ಕಾಬೂಲ್ ಅನ್ನು ಸುತ್ತುವರಿಯಿತು. ನಿನ್ನೆಯಷ್ಟೇ, ಅಫ್ಘಾನ್ ಅಧ್ಯಕ್ಷ ಅಶ್ರಫ್ ಘನಿ ಅವರು ಸ್ಥಳೀಯ ಮತ್ತು ಅಂತಾರಾಷ್ಟ್ರೀಯ ಪಾಲುದಾರರೊಂದಿಗೆ ಮುಂದೆ ಯಾವ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬುದರ ಕುರಿತು ಮಾತನಾಡುತ್ತಿದ್ದಾರೆ ಎಂದು ಹೇಳಿದ್ದರು.
- ಆಗಸ್ಟ್ 15 - ತಾಲಿಬಾನ್ ಭಯೋತ್ಪಾದಕರು ಕಾಬೂಲ್ ಪ್ರವೇಶಿಸಿ ನೇರವಾಗಿ ಅಧಿಕಾರವನ್ನು ಹಸ್ತಾಂತರಿಸಲು ಸರ್ಕಾರದೊಂದಿಗೆ ಮಾತನಾಡಲು ಆರಂಭಿಸಿದರು. ಇದು ಮಾತ್ರವಲ್ಲ, ಜನರು ಮನೆಯಿಂದ ಹೊರಹೋಗಬೇಡಿ ಅಥವಾ ದೇಶವನ್ನು ತೊರೆಯಲು ಪ್ರಯತ್ನಿಸಬೇಡಿ ಎಂದು ಬೆದರಿಕೆ ಹಾಕಿದರು. ಅಲ್ಲದೇ ಅಧ್ಯಕ್ಷ ಅಶ್ರಫ್ ಘನಿ ತಾಲಿಬಾನಿಗಳ ಎದುರು ಮಂಡಿಯೂರಿದರು. ಅಫ್ಘಾನಿಸ್ತಾನ ಸರ್ಕಾರವು ತಾಲಿಬಾನ್ ಪಡೆಗಳಿಗೆ ಶರಣಾದ ನಂತರ ಮುಲ್ಲಾ ಅಬ್ದುಲ್ ಘನಿ ಬರದಾರ್ ಈಗ ತಾಲಿಬಾನ್ ಆಡಳಿತದಲ್ಲಿ ಅಫ್ಘಾನಿಸ್ತಾನದ ಹೊಸ ಅಧ್ಯಕ್ಷರಾಗಲಿದ್ದಾರೆ.
ಇದನ್ನೂ ಓದಿ: ತಾಲಿಬಾನ್ ಪಡೆಗಳಿಗೆ ಶರಣಾದ ಅಫ್ಘಾನ್ ಅಧ್ಯಕ್ಷ ಅಶ್ರಫ್ ಘನಿ.. ಇವರೇ ನೋಡಿ ಅಫ್ಘಾನಿಸ್ತಾನದ ನೂತನ ಪ್ರೆಸಿಡೆಂಟ್..