ಕರಾಚಿ(ಪಾಕಿಸ್ತಾನ): ದೇಶದೆಲ್ಲೆಡೆ ದೀಪಗಳ ಹಬ್ಬದ ಸಂಭ್ರಮ ಮನೆಮಾಡಿದೆ. ಪಾಕಿಸ್ತಾನದ ಕರಾಚಿ ನಗರದಲ್ಲಿ ನೆಲೆಸಿರುವ ಹಿಂದೂ ಸಮುದಾಯದವರು ಕೋವಿಡ್ ನಿಯಮಗಳೊಂದಿಗೆ ಹಬ್ಬ ಆಚರಿಸಿದ್ದಾರೆ.
ಕರಾಚಿ ನಗರದ ಸ್ವಾಮಿ ನಾರಾಯಣ ದೇವಾಲಯದಲ್ಲಿ ದೀಪಾವಳಿ ಸಂಭ್ರಮ ಕಳೆಗಟ್ಟಿದೆ. ಈ ಕುರಿತು ಹಿಂದೂ ಸಮುದಾಯದ ಪೂಜಾ ಮಾತನಾಡಿ, ದೀಪಾವಳಿ ಹಬ್ಬವನ್ನು ದೀಪಗಳು ಮತ್ತು ಪಟಾಕಿಗಳಿಂದ ಆಚರಿಸಲಾಗುತ್ತದೆ. ಮಕ್ಕಳು, ಯುವಕರು, ವೃದ್ಧರು ಎಲ್ಲರೂ ಈ ಸಂಭ್ರಮದಲ್ಲಿ ಪಾಲ್ಗೊಂಡಿದ್ದಾರೆ. ಇಲ್ಲಿನ ಬಣ್ಣ, ಕಲಾಕೃತಿಗಳು ನಮ್ಮ ಮನಸ್ಸಿಗೆ ಮುದ ನೀಡುತ್ತಿವೆ ಎಂದು ಸಂತಸ ಹಂಚಿಕೊಂಡರು.
ಮತ್ತೋರ್ವ ಹಿಂದೂ ಗೃಹಿಣಿ ಗೀತಾ ಕುಮಾರಿ ಮಾತನಾಡಿ, ಕೋವಿಡ್ ನಿಯಮಗಳೊಂದಿಗೆ ಹಬ್ಬ ಆಚರಿಸುತ್ತಿದ್ದೇವೆ. ಈ ಸಂದರ್ಭ, ಮಹಾಮಾರಿ ಕೊರೊನಾವನ್ನು ಆದಷ್ಟು ಬೇಗ ಹೋಗಲಾಡಿಸುವಂತೆ ದೇವರಲ್ಲಿ ಪ್ರಾರ್ಥಿಸಿದ್ದೇವೆ ಎಂದು ತಿಳಿಸಿದರು.
ಈ ದಿನ ಶ್ರೀರಾಮ 14 ವರ್ಷಗಳ ವನವಾಸದಿಂದ ಹಿಂದಿರುಗಿದ ದಿನ ಎಂದು ನಂಬಿಕೆ ಹಿಂದೂಗಳದ್ದಾಗಿದೆ. ಶ್ರೀರಾಮನು ರಾವಣನ ವಿರುದ್ಧ ಹೋರಾಡಿ ಗೆದ್ದಿದ್ದನು. ಹಾಗಾಗಿ ಭಾರತ ಸೇರಿದಂತೆ ವಿಶ್ವದಾದ್ಯಂತ ಇರುವ ಅನಿವಾಸಿ ಭಾರತೀಯರು ತಮ್ಮ ಮನೆಗಳನ್ನು ದೀಪಗಳಿಂದ ಅಲಂಕರಿಸುವ ಮೂಲಕ, ಉಡುಗೊರೆಗಳನ್ನು ವಿನಿಮಯ ಮಾಡಿಕೊಳ್ಳುವ ಮೂಲಕ ಹಬ್ಬ ಆಚರಿಸುತ್ತಾರೆ. ಜೊತೆಗೆ "ಕತ್ತಲೆಯ ವಿರುದ್ಧ ಬೆಳಕಿನ ವಿಜಯ, ಕೆಟ್ಟದರ ವಿರುದ್ಧ ಉತ್ತಮತೆಯ ವಿಜಯ, ಅಜ್ಞಾನದ ವಿರುದ್ಧ ಜ್ಞಾನದ ವಿಜಯ''ವನ್ನು ಸ್ಮರಿಸುವ ಸಲುವಾಗಿ ಈ ದೀಪಗಳ ಹಬ್ಬವನ್ನು ಆಚರಿಸಲಾಗುತ್ತದೆ.