ಕಾಬೂಲ್ (ಅಫ್ಘಾನಿಸ್ತಾನ): ಕ್ರಿಕೆಟ್, ಇದು ಆಫ್ಘನ್ನರನ್ನು ಒಂದುಗೂಡಿಸುವ ಕ್ರೀಡೆಯಾಗಿದೆ. ತಾಲಿಬಾನ್ ದೇಶವನ್ನೂ ಸ್ವಾಧೀನಪಡಿಸಿಕೊಂಡಿದ್ದರೂ ಇದರ ನಡುವೆ ಕ್ರಿಕೆಟ್ ಬೆಳೆಯುತ್ತಲೇ ಇರುತ್ತದೆ ಎಂದು ಅಫ್ಘಾನಿಸ್ತಾನ ಕ್ರಿಕೆಟ್ ತಂಡದ ಮಾಜಿ ಕೋಚ್ ಲಾಲಚಂದ್ ರಜಪೂತ್ ಹೇಳಿದ್ದಾರೆ.
ತಾಲಿಬಾನ್ ನಿಯಂತ್ರಿತ ಪ್ರದೇಶದಲ್ಲಿ ಕ್ರಿಕೆಟ್ ಭವಿಷ್ಯದ ಬಗ್ಗೆ ಈಟಿವಿ ಭಾರತ ದೂರವಾಣಿ ಕರೆ ಮೂಲಕ ರಜಪೂತ್ ಅವರ ಸಂದರ್ಶನ ನಡೆಸಿದೆ. ಈ ವೇಳೆ, ಮಾತನಾಡಿದ ಲಾಲಚಂದ್ ರಜಪೂತ್, ಅಫ್ಘಾನಿಸ್ತಾನದ ಜನರು ಕ್ರಿಕೆಟ್ ಬಗ್ಗೆ ಉತ್ಸುಕರಾಗಿದ್ದಾರೆ. ಇದು ಅವರಿಗೆ ತುಂಬಾ ಸಂತೋಷವನ್ನು ತರುವ ಕ್ರೀಡೆಯಾಗಿದೆ. ರಶೀದ್ ಖಾನ್, ಮೊಹಮ್ಮದ್ ನಬಿ ಮತ್ತು ಮುಜೀಬ್‌ನಂತಹ ವಿಶ್ವ ದರ್ಜೆಯ ಬೌಲರ್‌ಗಳನ್ನು ಹೊಂದಿರುವ ದೇಶವನ್ನು ವಿಶ್ವ ಭೂಪಟದಲ್ಲಿ ತಂದ ಕ್ರೀಡೆಯಾಗಿದೆ. ನಮ್ಮ ರಾಷ್ಟ್ರದಲ್ಲಿ ಕ್ರಿಕೆಟ್ ಮುಂದುವರಿಯುತ್ತದೆ ಎಂದು ಹೇಳಿದರು.
ಇದನ್ನೂ ಓದಿ: ಕ್ರಿಕೆಟ್ಗೆ ಬೆಂಬಲ ಸೂಚಿಸಿದ ತಾಲಿಬಾನ್.. ಟಿ20 ವಿಶ್ವಕಪ್ನಲ್ಲಿ ಆಡಲಿದೆ ಅಫ್ಘಾನಿಸ್ತಾನ್..
ಪಾಕಿಸ್ತಾನದ ನಿರಾಶ್ರಿತರ ಶಿಬಿರಗಳಲ್ಲಿ ಅಭ್ಯಾಸ ಮಾಡುವುದರಿಂದ ಹಿಡಿದು 2007ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಾವಳಿಯಲ್ಲಿ ಆಡಿ ಕಳೆದೊಂದು ದಶಕದಿಂದ ಛಾಪು ಮೂಡಿಸಿದ್ದಾರೆ. ಇಂಹತ ಒಂದು ಕ್ರೀಡೆ ತಾಲಿಬಾನ್ ಹಿಡಿತದ ನಡುವೆಯೂ ಬೆಳೆಯಲಿದೆ ಎಂದು 2016 ರಿಂದ 2017 ರವರೆಗೆ ಅಫ್ಘಾನಿಸ್ತಾನ ಕ್ರಿಕೆಟ್ ತಂಡದ ಕೋಚ್ ಆಗಿ ಸೇವೆ ಸಲ್ಲಿಸಿದ್ದ ರಜಪೂತ್ ಅಭಿಪ್ರಾಯಪಟ್ಟಿದ್ದಾರೆ.
ಇನ್ನು, ಈಗೀಗ ವಿಶ್ವದ ಟಾಪ್ ತಂಡಗಳೊಡನೆ ಗುರುತಿಸಿಕೊಳ್ಳುತ್ತಿದ್ದ ಅಫ್ಘಾನಿಸ್ತಾನ ಕ್ರಿಕೆಟ್ ತಂಡಕ್ಕೆ ತಮ್ಮ ಸಂಪೂರ್ಣ ಬೆಂಬಲ ನೀಡುವುದಾಗಿ ತಾಲಿಬಾನ್ ಕೂಡ ಹೇಳಿದೆ ಎನ್ನಲಾಗಿದೆ.