ದುಬೈ: ಶಾಹೀನ್ ಚಂಡಮಾರುತದಿಂದ ಸಾವನ್ನಪ್ಪಿದವರ ಸಂಖ್ಯೆ ಸೋಮವಾರ 12ಕ್ಕೆ ಏರಿಕೆಯಾಗಿದ್ದು, ಇರಾನ್‌ನ ಇತರ ಮೀನುಗಾರರು ನಾಪತ್ತೆಯಾಗಿದ್ದಾರೆ. ಚಂಡಮಾರುತವು ಒಮನ್‌ಗೆ ಅಪ್ಪಳಿಸಿದ್ದು, ಮತ್ತಷ್ಟು ಒಳನಾಡಿಗೆ ಸಾಗಿ ದುರ್ಬಲಗೊಂಡಿತು.
ಒಮನ್ನಲ್ಲಿ ಚಂಡಮಾರುತದ ಪರಿಣಾಮ ಭಾರೀ ಮಳೆ ಸುರಿದು, ಭೂಕುಸಿತದಿಂದ ಇಬ್ಬರು ಸಾವನ್ನಪ್ಪಿದ್ದಾರೆ. ಮಗುವೊಂದು ಪ್ರವಾಹದ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದೆ. ರಕ್ಷಣಾ ತಂಡಗಳು ಬೀಡುಬಿಟ್ಟಿದ್ದು, ಶವಗಳನ್ನು ಹೊರಗೆ ತೆಗೆಯಲಾಗಿದೆ. ಗಂಟೆಗೆ 120 ಕಿ.ಮೀ. ವೇಗದಲ್ಲಿ ಗಾಳಿ ಬೀಸುತ್ತಿರುವುದರಿಂದ ವಿಮಾನ ಸಂಚಾರ ವ್ಯತ್ಯಯವಾಗಿದೆ.
ಇರಾನ್‌ನಲ್ಲಿ, ಪಾಕಿಸ್ತಾನದೊಂದಿಗಿನ ಇಸ್ಲಾಮಿಕ್ ಗಣರಾಜ್ಯದ ಗಡಿಯಲ್ಲಿರುವ ಮೀನುಗಾರಿಕಾ ಗ್ರಾಮವಾದ ಪಸಬಂದರ್‌ನಲ್ಲಿ ನಾಪತ್ತೆಯಾಗಿದ್ದ ಐವರು ಮೀನುಗಾರರಲ್ಲಿ ಒಬ್ಬರ ಮೃತದೇಹವನ್ನು ರಕ್ಷಣಾ ತಂಡದವರು ಪತ್ತೆ ಮಾಡಿದ್ದಾರೆ ಎಂದು ರಾಜ್ಯ ದೂರದರ್ಶನ ಹೇಳಿದೆ. ಭಾನುವಾರ ಮುಂಜಾನೆ, ಇರಾನಿನ ಪಾರ್ಲಿಮೆಂಟ್ ಡೆಪ್ಯೂಟಿ ಸ್ಪೀಕರ್ ಅಲಿ ನಿಕ್ಜಾದ್ ಅವರು ಚಂಡಮಾರುತದಿಂದಾಗಿ ಆರು ಮೀನುಗಾರರು ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾರೆ.