ಡಾಕಾ: ಕೊರೊನಾ ಹೊಡೆತದ ಬೆನ್ನಲ್ಲೇ ಎದ್ದಿರುವ ಅಂಫಾನ್ ಚಂಡಮಾರುತದ ಅಬ್ಬರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಬಿರುಗಾಳಿ ಸಹಿತ ಧಾರಾಕಾರ ಮಳೆಯಾಗುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಬಾಂಗ್ಲಾದೇಶದಲ್ಲಿ ಬರೋಬ್ಬರಿ 20 ಲಕ್ಷ ಮಂದಿಯನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗುತ್ತಿದೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.
400 ಕಿಲೋ ಮೀಟರ್ ವೇಗದಲ್ಲಿ ಅಂಫಾನ್ ಚಂಡಮಾರುತ ಬಾಂಗ್ಲಾದ ಕರಾವಳಿಯತ್ತ ಬೀಸುತ್ತಿದೆ. ಪರಿಣಾಮ ಇಂದು ಸಂಜೆ ವೇಳೆಗೆ ಕೆಲ ಪ್ರದೇಶಗಳಲ್ಲಿ ಭೂಮಿಗೆ ಅಪ್ಪಳಿಸುವ ಸಾಧ್ಯತೆ ಇದೆ. ಭೂಸೇನೆ, ನೌಕಾದಳ ಹಾಗೂ ವಾಯುಸೇನೆ ಪರಿಸ್ಥಿತಿಯನ್ನು ಎದುರಿಸಲು ಕಾರ್ಯಸನ್ನದ್ಧವಾಗಿವೆ.
ಅಂಫಾನ್‌ನ ಚಂಡಮಾರುತ ಭೂಮಿಗೆ ಅಪ್ಪಳಿಸುವ ಎಚ್ಚರಿಕೆ ನೀಡಿ, ಕೆಲ ಜಿಲ್ಲೆಗಳನ್ನು 'ಗ್ರೇಟ್ ಡೇಂಜರ್' ಎಂದು ಘೋಷಿಸಲಾಗಿದೆ. 2007ರಲ್ಲಿ ಸಿಡರ್ ಚಂಡಮಾರುತ ಬಾಂಗ್ಲಾದ ಕರಾವಳಿ ಭಾಗದಲ್ಲಿ 3500 ಮಂದಿಯನ್ನು ಬಲಿ ಪಡೆದಿತ್ತು. ಸದ್ಯ ಕಾಣಿಸಿಕೊಂಡಿರುವ ಸೈಕ್ಲೋನ್ ಹಿನ್ನೆಲೆಯಲ್ಲಿ ಎಲ್ಲಾ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
ಇಂದು ಸಂಜೆ 6 ಗಂಟೆ ಸುಮಾರಿಗೆ ಚಂಡಮಾರುತ ಭೂಮಿಗೆ ಅಪ್ಪಳಿಸುವ ಸಾಧ್ಯತೆ ಇದೆ. ಪರಿಸ್ಥಿತಿಯನ್ನು ಎದುರಿಸಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿರುವುದಾಗಿ ವಿಪತ್ತು ನಿರ್ವಹಣೆ ಮತ್ತು ಪರಿಹಾರ ರಾಜ್ಯ ಸಚಿವ ಇನಾಮುರ್ ರೆಹಮಾನ್ ತಿಳಿಸಿದ್ದಾರೆ. ಸಂಭವಿಸಬಹುದಾದ ಅನಾಹುತಗಳನ್ನು ತಪ್ಪಿಸಲು 2.2 ಮಿಲಿಯನ್ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲು ಅಧಿಕಾರಿಗಳು ಕ್ರಮ ಕೈಗೊಂಡಿರುವುದಾಗಿ ಸಚಿವರು ವಿವರಿಸಿದ್ದಾರೆ.