ಇಸ್ಲಾಮಾಬಾದ್(ಪಾಕಿಸ್ತಾನ): ಸರ್ಕಾರವು ಮಹತ್ವಾಕಾಂಕ್ಷೆಯ 'ಚೀನಾ ಪಾಕಿಸ್ತಾನ ಆರ್ಥಿಕ ಕಾರಿಡಾರ್' (ಸಿಪಿಇಸಿ) ಯೋಜನೆಯನ್ನು ಎಂತಹದ್ದೇ ಪರಿಸ್ಥಿತಿಯಲ್ಲೂ ಪೂರ್ಣಗೊಳಿಸುವುದಾಗಿ ಮತ್ತು ಅದರ ಪ್ರಯೋಜನಗಳನ್ನು ರಾಷ್ಟ್ರಕ್ಕೆ ರವಾನಿಸುವುದಾಗಿ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಪ್ರತಿಜ್ಞೆ ಮಾಡಿದ್ದಾರೆ. ಈ ಮೂಲಕ ಅವರು ಭಾರತಕ್ಕೆ ಪರೋಕ್ಷ ಸಂದೇಶ ರವಾನಿಸಿದ್ದಾರೆ.
"ಕಾರಿಡಾರ್ ಪಾಕಿಸ್ತಾನ - ಚೀನಾ ಸ್ನೇಹದ ಅಭಿವ್ಯಕ್ತಿಯಾಗಿದೆ ಮತ್ತು ಸರ್ಕಾರವು ಅದನ್ನು ಯಾವುದೇ ವೆಚ್ಚದಲ್ಲಿ ಪೂರ್ಣಗೊಳಿಸುತ್ತದೆ ಮತ್ತು ಅದರ ಫಲವನ್ನು ಪ್ರತಿ ಪಾಕಿಸ್ತಾನಿಗೂ ತಲುಪಿಸುತ್ತದೆ" ಎಂದು ಸಿಪಿಇಸಿ ಯೋಜನೆಗಳ ಪ್ರಗತಿಯನ್ನು ಪರಿಶೀಲಿಸಲು ಶುಕ್ರವಾರ ನಡೆಸಲಾದ ಸಭೆಯಲ್ಲಿ ಇಮ್ರಾನ್ ಖಾನ್ ಹೇಳಿದ್ದನ್ನು ಡಾನ್ ಸುದ್ದಿ ಸಂಸ್ಥೆ ಉಲ್ಲೇಖಿಸಿದೆ.
ದೇಶದ ಸಾಮಾಜಿಕ - ಆರ್ಥಿಕ ಅಭಿವೃದ್ಧಿಗೆ ಸಿಪಿಇಸಿ ಅತ್ಯುತ್ತಮ ಯೋಜನೆ ಎಂದು ಹೇಳಿದ ಅವರು, ಬೃಹತ್ ಬಹುಮುಖಿ ಉಪಕ್ರಮವು ರಾಷ್ಟ್ರದ ಉಜ್ವಲ ಭವಿಷ್ಯವನ್ನು ಖಾತರಿಪಡಿಸುತ್ತದೆ ಎಂದು ಭರವಸೆ ವ್ಯಕ್ತಪಡಿಸಿದರು.
ಸಿಪಿಇಸಿ ಪ್ರಾಧಿಕಾರದ ಕಾರ್ಯಕ್ಷಮತೆಯನ್ನು ಶ್ಲಾಘಿಸಿದ ಪ್ರಧಾನಿ, ಅದರ ಕಾರ್ಯ ಮತ್ತು ಸಾಮರ್ಥ್ಯವನ್ನು ಸುಧಾರಿಸಲು ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಹೇಳಿದರು.