ಸಿಯೋಲ್: ಕೋವಿಡ್-19 ಲಸಿಕೆಯ ಕನಿಷ್ಠ ಒಂದು ಡೋಸ್ ಪಡೆದವರು ಸಹ ಜುಲೈ ತಿಂಗಳಿನಿಂದ ಹೊರಾಂಗಣದಲ್ಲಿ ಮಾಸ್ಕ್ ಧರಿಸುವ ಅಗತ್ಯವಿಲ್ಲ ಎಂದು ದಕ್ಷಿಣ ಕೊರಿಯಾ ಸರ್ಕಾರ ತನ್ನ ಪ್ರಜೆಗಳಿಗೆ ಸೂಚಿಸಿದೆ.
ವೃದ್ಧರು ಆದಷ್ಟು ಬೇಗ ಲಸಿಕೆ ಪಡೆಯಲು ಉತ್ತೇಜಿಸುವ ಕ್ರಮವಾಗಿ ದಕ್ಷಿಣ ಕೊರಿಯಾ ಹೀಗೆ ಹೇಳಿದ್ದು, ಸೆಪ್ಟೆಂಬರ್ ವೇಳೆಗೆ 52 ದಶಲಕ್ಷ ಜನಸಂಖ್ಯೆಯ ಪೈಕಿ ಶೇ.70ರಷ್ಟು ಜನರಿಗೆ ವ್ಯಾಕ್ಸಿನ್ ನೀಡುವ ಗುರಿ ಹೊಂದಿದೆ.
ವ್ಯಾಕ್ಸಿನ್ ಮೊದಲ ಡೋಸ್ ಪಡೆದವರು ಜೂನ್‌ನಿಂದ ಹೆಚ್ಚಿನ ಸಂಖ್ಯೆಯಲ್ಲಿ ಸೇರಬಹುದಾಗಿದೆ. ಜುಲೈನಿಂದ ಸಂಪೂರ್ಣವಾಗಿ ಅಂದರೆ ಎರಡೂ ಡೋಸ್ ಪಡೆದವರು ಅಥವಾ ಒಂದೇ ಡೋಸ್ ಹಾಕಿಸಿಕೊಂಡವರು ಮಾಸ್ಕ್ ಧರಿಸಬೇಕಿಲ್ಲ ಎಂದು ದಕ್ಷಿಣ ಕೊರಿಯಾ ಪ್ರಧಾನಿ ಕಿಮ್ ಬೂ-ಕ್ಯುಮ್ ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: ಕೊರೊನಾ ಮೂಲದ ತನಿಖೆ ಚುರುಕುಗೊಳಿಸಿ: ಯುಎಸ್ ಗುಪ್ತಚರ ಸಂಸ್ಥೆಗೆ ಬೈಡನ್ ಆದೇಶ
ಈವರೆಗೆ 60 ರಿಂದ 74 ವರ್ಷದೊಳಗಿನ ಶೇ.60 ಕ್ಕೂ ಹೆಚ್ಚು ಜನರು ಲಸಿಕೆಗೆ ನೋಂದಾಯಿಸಿಕೊಂಡಿದ್ದಾರೆ. ಇಂದಿನಿಂದ ಈ ವಯೋಮಾನದ ಜನರಿಗೆ 12,000 ಕ್ಕೂ ಹೆಚ್ಚು ಕೇಂದ್ರಗಳಲ್ಲಿ ಲಸಿಕೆ ನೀಡಲಾಗುವುದು ಎಂದು ಅಲ್ಲಿನ ಆರೋಗ್ಯ ಸಚಿವರು ಮಾಹಿತಿ ನೀಡಿದ್ದಾರೆ. ದಕ್ಷಿಣ ಕೊರಿಯಾದಲ್ಲಿ ಕಳೆದ 24 ಗಂಟೆಗಳಲ್ಲಿ 707 ಹೊಸ ಕೋವಿಡ್ ಕೇಸ್ ವರದಿಯಾಗಿದೆ. ಇಲ್ಲಿಯವರೆಗೆ 1,37,682 ಮಂದಿಗೆ ಸೋಂಕು ತಗುಲಿದ್ದು, 1,940 ಮಂದಿ ಮೃತಪಟ್ಟಿದ್ದಾರೆ.
ಇತ್ತೀಚೆಗಷ್ಟೇ ಅಮೆರಿಕವು, ಶಾಲೆಗಳಲ್ಲಿ ಹೊರತುಪಡಿಸಿ ಕೋವಿಡ್ ಲಸಿಕೆಯ ಎರಡೂ ಡೋಸ್ಗಳನ್ನು ಪಡೆದವರು ಮಾಸ್ಕ್ ಧರಿಸುವ ಅವಶ್ಯಕತೆಯಿಲ್ಲ ಎಂದು ತನ್ನ ಜನತೆಗೆ ಸೂಚಿಸಿತ್ತು.