ಚೀನಾ: ಈತ ಚೀನಾದಲ್ಲಿ ಶ್ರೀಮಂತ ರೈತ. ಕೃಷಿಯಲ್ಲಿ ಬರುತ್ತಿದ್ದ ಆದಾಯವೇ ಈ ಮಟ್ಟಕ್ಕೆ ಬೆಳೆಯಲು ಸಾಧ್ಯವಾಗಿತ್ತು. ದುಪ್ಪಟ್ಟು ಆದಾಯ ಗಳಿಸುತ್ತಿದ್ದಂತೆಯೇ ಬಿಎಂಡಬ್ಲ್ಯೂ ಕಾರಲ್ಲಿ ಓಡಾಡಲೇಬೇಕೆಂಬ ಹುಚ್ಚು ಬೆಳೆಸಿಕೊಂಡ. ಅವನ ಇಚ್ಛೆಯಂತೆ ಕಾರನ್ನೂ ಖರೀದಿಸಿದ. ನಿಮಗೆ ಗೊತ್ತಲ್ಲವೇ ಬಿಎಂಡಬ್ಲ್ಯೂ ಕಾರಿಗೆ ಪೆಟ್ರೋಲ್ ದಾಹ ಜಾಸ್ತಿ ಅಂತಾ.. ಎಷ್ಟೇ ಪೆಟ್ರೋಲ್ ಹಾಕಿಸಿದ್ರೂ ಭಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಅನ್ನೋ ರೀತಿಯಾಗ್ತಾಯಿತ್ತು. ಕೊನೆಗೆ ಕಾರಿಗೆ ಇಂಧನ ಹಾಕಿಸೋದಕ್ಕೆ ದುಡ್ಡೇ ಇರ್ತಿರಲಿಲ್ಲ. ಅದಕ್ಕಾಗಿ ಈತ ಒಂದು ಕಳ್ಳ ದಾರಿ ಕಂಟ್ಕೊಂಡಿದ್ದ.
₹ 2 ಕೋಟಿ ಬೆಲೆ ಬಾಳುವ ಬಿಎಂಡಬ್ಲ್ಯೂ ಕಾರನ್ನು ಖರೀದಿಸಿದ. ಆಗ ಅವನ ನೆಮ್ಮದಿಗೆ, ಸಂತೋಷಕ್ಕೆ ಪಾರವೇ ಇರಲಿಲ್ಲ. ಅಲ್ಲದೆ, ಸುತ್ತಾಟವೂ ಹೆಚ್ಚಾಗಿತ್ತು. ನಂತರದ ದಿನಗಳಲ್ಲಿ ಪೆಟ್ರೋಲ್ ಬೆಲೆ ಗಗನಕ್ಕೇರಿತು. ಇದರ ಜೊತೆಗೆ ಕೃಷಿಯಲ್ಲಿ ಆದಾಯ ಪಾತಾಳಕ್ಕೆ ಹೋಯ್ತು. ಆರ್ಥಿಕ ಸಂಕಷ್ಟವೂ ಎದುರಾಯ್ತು. ಬೇರಾವ ಆದಾಯ ಮೂಲಗಳನ್ನು ಹೊಂದಿರದ ಆತನಿಗೆ ಕಾರಿನ ನಿರ್ವಹಣೆ ಕಷ್ಟವಾಯ್ತು. ಹಣ ಸಂಪಾದನೆಗೆ ಬೇರೆಲ್ಲಾ ಚಟುವಟಿಕೆಗಳನ್ನು ಮಾಡಿದ್ದಾನೆ. ಆದರೆ, ಆದಾಯ ಬರಲಿಲ್ಲ. ಏನು ಮಾಡಲು ತೋಚದೆ, ಕೊನೆಗೆ ಕಾರಿನ ಹೊಟ್ಟೆ ತುಂಬಿಸಲು ಕಳ್ಳತನದ ಹಾದಿಗಿಳಿದ.
ಏಪ್ರಿಲ್ನಿಂದ ಈ ಕೃತ್ಯದಲ್ಲಿ ತೊಡಗಿದ್ದ:
ಸಾಮಾನ್ಯವಾಗಿ ಕಳ್ಳತನ ಅಂದರೆ, ಚಿನ್ನ, ಬೆಳ್ಳಿ, ಬೈಕ್,... ಹೀಗೆ ಬೆಲೆ ಬಾಳುವ ವಸ್ತುಗಳನ್ನು ಕನ್ನ ಹಾಕುವುದನ್ನು ನೋಡಿದ್ದೇವೆ. ಆದರೆ, ಈತ ಕೋಳಿ, ಬಾತುಕೋಳಿಗಳನ್ನು ಎಗರಿಸುತ್ತಿದ್ದ. ವಿಚಿತ್ರ ಎನಿಸಿದ್ರೂ ಇದು ಸತ್ಯ. ಸಿಚುವಾನ್ ಪ್ರಾಂತ್ಯದಲ್ಲಿನ ಲಿಂಶ್ಯೂ ಕೌಂಟಿ ಗ್ರಾಮ ಸೇರಿದಂತೆ ಸುತ್ತ-ಮುತ್ತಲ ಹಳ್ಳಿಗಳ ಫಾರಂಗಳಲ್ಲಿ ಕೋಳಿ, ಬಾತುಕೋಳಿಗಳನ್ನ ಕದ್ದು ಮಾರುತ್ತಿದ್ದ. ಅದರಲ್ಲಿ ಬರುವ ಹಣದಿಂದಲೇ ಕಾರಿಗೆ ಪೆಟ್ರೋಲ್ ಹಾಕಿಸಿಕೊಳ್ಳುತ್ತಿದ್ದ. ಏಪ್ರಿಲ್ನಿಂದ ಈ ಕೃತ್ಯ ಎಸಗುತ್ತಿದ್ದ ಒಂದುಕಾಲದ ಆಗರ್ಭ ಶ್ರೀಮಂತ ರೈತ.
ಕಳ್ಳತನಕ್ಕೆ ಬೈಕ್ನಲ್ಲಿಯೇ ಹೋಗುತ್ತಿದ್ದ:
ಮಧ್ಯರಾತ್ರಿ ಆಗುತ್ತಿದ್ದಂತೆ ಕೋಳಿ ಕದಿಯಲು ಆತ ಬೈಕ್ ಏರಿ ಹೋಗುತ್ತಿದ್ದ. ಮಧ್ಯರಾತ್ರಿಯವರೆಗೆ ಕೋಳಿ ಮತ್ತು ಬಾತು ಕೋಳಿಗಳ ಕಳ್ಳತನ ಸಾಗುತ್ತಿತ್ತು. ಇದ್ದಕ್ಕಿದ್ದಂತೆ ಊರಿನಲ್ಲಿ ಕೋಳಿಗಳು ಮಾಯವಾಗುತ್ತಿರುವುದೇಕೆ ಎಂದು ಚಿಂತೆಗೆ ಬಿದ್ದ ಜನ ಅಲ್ಲಲ್ಲಿ ಸಿಸಿ ಕ್ಯಾಮರಾ ಅಳವಡಿಸಿದಾಗ ಶ್ರೀಮಂತ ಕಳ್ಳ ಸಿಕ್ಕಿ ಬಿದ್ದಿದ್ದಾನೆ. ಬಳಿಕ ಅಲ್ಲಿನ ಸ್ಥಳೀಯರು ಈ ವಿಷಯದ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರು. ಮೇ 22ರಂದು ಬಿಎಂಡ್ಲ್ಯೂ ಕಾರಿನಲ್ಲಿ ಹೋಗುತ್ತಿದ್ದ ಆತನ ಬೆನ್ನು ಬಿದ್ದ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿ ಪರಾರಿಯಾಗಿದ್ದ. ಬೆನ್ನು ಬಿಡದ ಪೊಲೀಸರು, ಆತನ ಮನೆಯಲ್ಲಿಯೇ ಬಂಧಿಸಿದ್ದರು.
ಹೌದುರೀ ನಾನೇ ಕಳ್ಳ, ಕದ್ದಿರೋದು ನಾನೇ ಏನ್ಮಾಡಲಿ ಹೇಳಿ:
ಕದಿಯಲು ಹೋಗುತ್ತಿದ್ದಾಗ ಬಳಸುತ್ತಿದ್ದ ಬೈಕ್‌ನ ವಶಪಡಿಸಿಕೊಂಡಿದ್ದಾರೆ. ಕೋಳಿ, ಬಾತು ಕೋಳಿಗಳು ಸಿಕ್ಕವು. ಬಂಧನದ ಬಳಿಕ ಯಾವ ಕಾರಣಕ್ಕಾಗಿ ಕಳ್ಳತನ ಮಾಡುತ್ತಿದ್ದೆ ಎಂಬುದನ್ನ ಕೇಳಿದ್ರೇ, ಸರ್ ಏನ್ಮಾಡಲಿ ದೊಡ್ಡಸ್ಥಿಕೆಗೆ ಕಾರು ತಗೊಂಡಿದ್ದೇನೆ. ಅದನ್ನ ನಡೆಸೋದು ಕಷ್ಟ. ಅದಕ್ಕೆ ಇಂಧನ ಹಾಕಿಸಿಕೊಳ್ಳೋದಕ್ಕೆ ದುಡ್ಡೇ ಇಲ್ಲ. ಬೇರೆ ದಾರಿ ಕಾಣದೇ ಕೋಳಿ, ಬಾತುಕೋಳಿ ಕದ್ದು, ಅದರಿಂದ ಬರ್ತಿದ್ದ ಹಣದಲ್ಲಿ ಬಿಎಂಡಬ್ಲ್ಯೂ ಕಾರಿಗೆ ಪೆಟ್ರೋಲ್ ಹಾಕಿಸುತ್ತಿದ್ದೆ ಅಂತಾ ಕಳ್ಳ ಪೊಲೀಸರ ಎದುರಿಗೆ ತಪ್ಪೊಪ್ಪಿಕೊಂಡಿದ್ದಾನೆ. ಅದಕ್ಕೆ ಹೇಳೋದು ಹಾಸಿಗೆ ಇದ್ದಷ್ಟೇ ಕಾಲು ಚಾಚಬೇಕು ಅಂತಾ.. ಅಲ್ವೇ..