ಬೀಜಿಂಗ್: ಚೀನಾದಲ್ಲಿ ಹೊಸದಾಗಿ ಕೊರೊನಾ ವೈರಸ್ ಸೋಂಕಿತ 22 ಮಂದಿ ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದ್ದು, ಸಾವಿನ ಸಂಖ್ಯೆ 3,162 ಕ್ಕೆ ತಲುಪಿದೆ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.
ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ಮೊದಲ ಬಾರಿಗೆ ವುಹಾನ್ ನಗರಕ್ಕೆ ಭೇಟಿ ನೀಡಿದ್ದು, ರೋಗವನ್ನು ನಿಯಂತ್ರಣಕ್ಕೆ ಶ್ರಮಿಸುತ್ತಿರುವ ಅಧಿಕಾರಿಗಳು ಮತ್ತು ವೈದ್ಯಕೀಯ ಸಿಬ್ಬಂದಿಯನ್ನು ಶ್ಲಾಘಿಸಿದ್ದಾರೆ. ಮಾರಣಾಂತಿಕ ಸಾಂಕ್ರಾಮಿಕ ವಿರುದ್ಧ, ಪರಿಸ್ಥಿತಿ ಸ್ಥಿರಗೊಳಿಸುವಲ್ಲಿ ಆರಂಭಿಕ ಯಶಸ್ಸು ಸಾಧಿಸಲಾಗಿದೆ ಎಂದು ಹೇಳಿದರು.
ಮತ್ತೆ ಹೊಸದಾಗಿ 24 ಕೊರೊನಾ ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದು, 22 ಮಂದಿ ಸಾವನ್ನಪ್ಪಿದ್ದಾರೆ. ಇವರೆಲ್ಲ ಹುಬೈ ಪ್ರಾಂತ್ಯ ಮತ್ತು ಅದರ ರಾಜಧಾನಿ ವುಹಾನ್‌ನವರಾಗಿದ್ದಾರೆ ಎಂದು ಚೀನಾದ ಅಂತಾರಾಷ್ಟೀಯ ಆರೋಗ್ಯ ಆಯೋಗವು(ಎನ್ಹೆಚ್ಸಿ) ಬುಧವಾರ ವರದಿ ಮಾಡಿದೆ.
ಕಳೆದ ಮೂರು ತಿಂಗಳಿಂದ ಸಾವನ್ನಪ್ಪಿರುವ 3,162 ಮಂದಿಯನ್ನು ಒಳಗೊಂಡಂತೆ ಇಲ್ಲಿಯವರೆಗೆ ಚೀನಾದಲ್ಲೇ ಸುಮಾರು 80,956 ಜನರಲ್ಲಿ ಕೊರೊನಾ ವೈರಸ್ ಪತ್ತೆಯಾಗಿದೆ. ಅದರಲ್ಲಿ 16,145 ಜನರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು , 61570 ಜನರು ಗುಣಮುಖರಾಗಿದ್ದಾರೆ.