ಬೀಜಿಂಗ್: ಚೀನಾದಲ್ಲಿ 15 ಹೊಸ ಲಕ್ಷಣರಹಿತ (asymptomatic) ಕೊರೊನಾ ವೈರಸ್ ಪ್ರಕರಣಗಳು ವರದಿಯಾಗಿದ್ದು, ಈವರೆಗೆ ಒಟ್ಟು 836 ಲಕ್ಷಣರಹಿತ ಪ್ರಕರಣಗಳು ಬೆಳಕಿಗೆ ಬಂದಿವೆ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.
ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗ (ಎನ್‌ಹೆಚ್‌ಸಿ)ದ ಪ್ರಕಾರ, ಶುಕ್ರವಾರದವರೆಗೆ 63 ವಿದೇಶಿಗರು, ಸೇರಿದಂತೆ ಒಟ್ಟು 836 ಲಕ್ಷಣರಹಿತ ಪ್ರಕರಣಗಳು ಇನ್ನೂ ವೈದ್ಯಕೀಯ ವೀಕ್ಷಣೆಯಲ್ಲಿವೆ.
ಈ ರೋಗಲಕ್ಷಣಗಳಿಲ್ಲದ ಪ್ರಕರಣಗಳು ವೈರಸ್ ಹುಟ್ಟಿದ ಕೇಂದ್ರಗಳಾದ ಹುಬೈ ಪ್ರಾಂತ್ಯ ಮತ್ತು ಅದರ ರಾಜಧಾನಿ ವುಹಾನ್ನಿಂದ ವರದಿಯಾಗುತ್ತಿವೆ. ಅಲ್ಲಿ ಕಳೆದ 35 ದಿನಗಳವರೆಗೆ ಯಾವುದೇ ಪಾಸಿಟಿವ್ ಪ್ರಕರಣಗಳು ವರದಿಯಾಗಿರಲಿಲ್ಲ ಎಂದು ಸ್ಥಳೀಯ ಆರೋಗ್ಯ ಸಂಸ್ಥೆ ತಿಳಿಸಿದೆ.
ಈ ಪ್ರಾಂತ್ಯದಲ್ಲಿ ಲಾಕ್‌ಡೌನ್ ಸಡಿಲಿಸಲಾಗಿದ್ದು, ಕಳೆದ ತಿಂಗಳಿನಿಂದ ಕಚೇರಿಗಳು, ವ್ಯಾಪಾರ ಮತ್ತು ಕೈಗಾರಿಕೆಗಳನ್ನು ತೆರೆಯಲಾಗಿದೆ. ಇಲ್ಲಿ ಜನಜೀವನೆ ಸಹಜ ಸ್ಥಿತಿಯತ್ತ ಮರಳುತ್ತಿದೆ.
ಶುಕ್ರವಾರ ಚೀನಾದಲ್ಲಿ ಯಾವುದೇ ಹೊಸ ಸಾವು - ನೋವುಗಳು ವರದಿಯಾಗಿಲ್ಲ. ಸದ್ಯ ಚೀನಾದ ಸಾವಿನ ಸಂಖ್ಯೆ 4,633 ರಷ್ಟಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 82,887 ಆಗಿದೆ. ಈಗ ಕೇವಲ 208 ರೋಗಿಗಳು ಮಾತ್ರ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಎನ್‌ಹೆಚ್‌ಸಿ ತಿಳಿಸಿದೆ.
ಲಕ್ಷಣರಹಿತ (asymptomatic) ಪ್ರಕರಣ ಎಂದರೇನು?
ಯಾವುದೇ ಗಮನಾರ್ಹ ಅಥವಾ ಮೇಲ್ನೋಟಕ್ಕೆ ಯಾವುದೇ ರೋಗಲಕ್ಷಣಗಳಿಲ್ಲದೇ ಆತನಲ್ಲಿ ರೋಗ ಅಥವಾ ಸೋಂಕು ಇದ್ದರೆ ಆ ವ್ಯಕ್ತಿಯು ಲಕ್ಷಣರಹಿತ ಕೊರೊನಾ ಪೀಡಿತ ಎಂದು ಅರ್ಥ
ರೋಗಲಕ್ಷಣ(symptomatic)ವಿರುವ ಪ್ರಕರಣ ಯಾವುದು?
ಯಾರಾದರೂ ರೋಗ ಅಥವಾ ರೋಗಸ್ಥಿತಿಗೆ ಸಂಬಂಧಿಸಿದ ಸಾಮಾನ್ಯ ರೋಗಲಕ್ಷಣಗಳನ್ನು ಹೊಂದಿದ್ದರೆ ಅವರನ್ನು ರೋಗಲಕ್ಷಣ ಅಥವಾ symptomatic ಎಂದು ಪರಿಗಣಿಸಲಾಗುತ್ತದೆ.