ಕಾಬೂಲ್: ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನಲ್ಲಿ ಶನಿವಾರ ಆತ್ಮಾಹುತಿ ದಾಳಿ ಸಂಭವಿಸಿದೆ. ಘಟನೆಯಲ್ಲಿ 18 ಮಂದಿ ಸಾವನ್ನಪ್ಪಿದ್ದಾರೆ. ಶಾಲಾ ಮಕ್ಕಳು ಸೇರಿದಂತೆ 57 ಜನರು ಗಾಯಗೊಂಡಿದ್ದಾರೆ ಎಂದು ಆಂತರಿಕ ಸಚಿವಾಲಯ ತಿಳಿಸಿದೆ.
ಪಶ್ಚಿಮ ಕಾಬೂಲ್‌ನ ಡ್ಯಾಶ್-ಎ-ಬಾರ್ಚಿ ಸಮೀಪದ ಶಿಕ್ಷಣ ಕೇಂದ್ರವೊಂದರ ಹೊರಗೆ ಈ ಸ್ಫೋಟ ಸಂಭವಿಸಿದೆ. ದಾಳಿಕೋರನು ಶಿಕ್ಷಣ ಕೇಂದ್ರವನ್ನು ಪ್ರವೇಶಿಸಲು ಪ್ರಯತ್ನಿಸುತ್ತಿದ್ದ, ಈ ವೇಳೆ ಭದ್ರತಾ ಸಿಬ್ಬಂದಿ ತಡೆದಾಗ ದಾಳಿಕೋರ ತನ್ನನ್ನು ತಾನು ಸ್ಫೋಟಗೊಳಿಸಿಕೊಂಡಿದ್ದಾನೆ ಎಂದು ಆಂತರಿಕ ಸಚಿವಾಲಯದ ವಕ್ತಾರ ತಾರಿಕ್ ಅರಿಯನ್ ಅವರು ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ. ಸಾವಿನ ಸಂಖ್ಯೆ ಇನ್ನು ಹೆಚ್ಚಾಗಬಹುದು ಎಂದಿದ್ದಾರೆ.
ತಾಲಿಬಾನ್ ಸೇರಿದಂತೆ ಈ ಸ್ಫೋಟದ ಜವಾಬ್ದಾರಿಯನ್ನು ಯಾವುದೇ ಸಂಘಟನೆ ಹೊತ್ತುಕೊಂಡಿಲ್ಲ. ಇಸ್ಲಾಮಿಕ್ ಸ್ಟೇಟ್ ಅಂಗ ಸಂಸ್ಥೆಯೊಂದು 2018 ರ ಆಗಸ್ಟ್ನಲ್ಲಿ ಶಿಕ್ಷಣ ಕೇಂದ್ರವೊಂದರಲ್ಲಿ ಇದೇ ರೀತಿಯ ಆತ್ಮಹತ್ಯಾ ದಾಳಿ ನಡೆಸುವ ಮೂಲಕ ಕ್ರೂರತೆ ಮರೆದಿತ್ತು. ಘಟನೆಯಲ್ಲಿ 34 ವಿದ್ಯಾರ್ಥಿಗಳು ಸಾವನ್ನಪ್ಪಿದ್ದರು. ಇನ್ನು ದಶಕಗಳ ಕಾಲ ನಡೆದ ಯುದ್ಧವನ್ನು ಕೊನೆಗೊಳಿಸಲು ಇತ್ತೀಚೆಗೆ ತಾಲಿಬಾನ್ ಮತ್ತು ಅಫ್ಘನ್ ಪಡೆಗಳ ನಡುವೆ ಶಾಂತಿ ಮಾತುಕತೆ ನಡೆದಿದ್ದವು. ಆದರೂ ಸಹ ದೇಶದಲ್ಲಿ ಎರಡೂ ಸಂಘಟನೆಗಳ ನಡುವೆ ಸಂಘರ್ಷ ಹೆಚ್ಚಾಗಿವೆ ಎನ್ನಲಾಗುತ್ತಿದೆ.