ಬೀಜಿಂಗ್ : ಕಳೆದ ಎರಡು ದಿನಗಳಲ್ಲಿ 7 ಹೊಸ ಕೊರೊನಾ ವೈರಸ್ ಪ್ರಕರಣ ಪತ್ತೆಯಾದ ನಂತರ ಬೀಜಿಂಗ್ನ ಅತಿದೊಡ್ಡ ಸಗಟು ಆಹಾರ ಮಾರುಕಟ್ಟೆಯನ್ನು ಬಂದ್ ಮಾಡಲಾಗಿದೆ. 4000 ಮಳಿಗೆಗಳಿರುವ ಜಿನ್ಫಾಡಿ ಹೆಸರಿನ ಬೃಹತ್ ಮಾರುಕಟ್ಟೆಯ ಪ್ರದೇಶದಲ್ಲಿನ ಕೆಲಸಗಾರರಿಗೆ ಕೊರೊನಾ ತಗುಲಿರುವುದು ಹಾಗೂ ಸ್ಥಳದಲ್ಲಿ ವೈರಸ್ ಪತ್ತೆಯಾದ ನಂತರ ಇಡೀ ಮಾರುಕಟ್ಟೆಯನ್ನು ಸೀಲ್ ಮಾಡಿ ಸ್ಯಾನಿಟೈಸ್ ಮಾಡಲಾಗಿದೆ.
ಬೀಜಿಂಗ್ನಲ್ಲಿ ಹೊಸದಾಗಿ 6 ಕೊರೊನಾ ಪ್ರಕರಣ ಶುಕ್ರವಾರ ಪತ್ತೆಯಾಗಿರುವುದಾಗಿ ಚೀನಾದ ನ್ಯಾಷನಲ್ ಹೆಲ್ಥ್ ಕಮೀಷನ್ ಹೇಳಿದೆ. ಮತ್ತೊಂದು ಪ್ರಕರಣ ಗುರುವಾರ ಪತ್ತೆಯಾಗಿತ್ತು. 50 ದಿನಗಳ ಬಳಿಕ ಸ್ಥಳೀಯವಾಗಿ ಕೊರೊನಾ ಹರಡಿದ ಪ್ರಕರಣ ಇದಾಗಿದೆ.
ಆರಂಭದಲ್ಲಿ 3 ಕೊರೊನಾ ಪ್ರಕರಣ ಪತ್ತೆಯಾಗುತ್ತಿರುವಂತೆಯೇ ಎಲ್ಲೆಡೆ ರೆಡ್ ಅಲರ್ಟ್ ಘೋಷಿಸಲಾಯಿತು. ಈ ಮೂವರು ಸೋಂಕಿತರಲ್ಲಿ ಇಬ್ಬರು ಮಾರುಕಟ್ಟೆಯಲ್ಲಿ ಕೆಲಸ ಮಾಡುವವರು ಹಾಗೂ ಇನ್ನೋರ್ವ ಮಾಂಸ ಸಂಶೋಧನಾ ಲ್ಯಾಬ್ನಲ್ಲಿ ಕೆಲಸ ಮಾಡುವವನು ಎಂದು ಚೀನಾ ಮಾಧ್ಯಮಗಳು ವರದಿ ಮಾಡಿವೆ. ಮಾರುಕಟ್ಟೆಯಲ್ಲಿನ ಎಲ್ಲರಿಗೂ ಕೊರೊನಾ ಟೆಸ್ಟ್ ಮಾಡಲಾಗುತ್ತಿದೆ ಎಂದು ಸ್ಥಳೀಯ ನಗರಾಡಳಿತದ ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ. ಬೀಜಿಂಗ್ನ ಎಲ್ಲ ಆಹಾರ ಮಾರುಕಟ್ಟೆಗಳಲ್ಲಿನ ಆಹಾರವನ್ನು ಕೊರೊನಾ ವೈರಸ್ ಟೆಸ್ಟಿಂಗ್ಗೆ ಕಳುಹಿಸಲಾಗಿದೆ.
"ಈ ಕಟ್ಟಡವನ್ನು ತುರ್ತು ಕಾರಣಗಳಿಗಾಗಿ ಮುಚ್ಚಲಾಗಿದೆ." ಎಂಬ ಬರಹವಿದ್ದ ಬೋರ್ಡ್ಗಳು ಅಲ್ಲಲ್ಲಿ ಕಂಡು ಬಂದವು. ಬಹುತೇಕ ಮಾರುಕಟ್ಟೆಗಳ ಸ್ಥಳದಲ್ಲಿ ಭಾರಿ ಸಂಖ್ಯೆಯ ಪೊಲೀಸರನ್ನು ನಿಯೋಜಿಸಲಾಗಿದೆ. ಎಲ್ಲಿಯೂ ಸಾರ್ವಜನಿಕರನ್ನು ಬಿಡಲಾಗುತ್ತಿಲ್ಲ. ಕೊರೊನಾ ವೈರಸ್ ಮರುಕಳಿಸಿ ದಾಳಿಯಾಗುವುದನ್ನು ತಡೆಯಲು ಬೀಜಿಂಗ್ನ ಅಧಿಕಾರಿಗಳು ಹರಸಾಹಸ ಮಾಡುತ್ತಿದ್ದಾರೆ. ಸೋಮವಾರದಿಂದ ಆರಂಭವಾಗಬೇಕಿದ್ದ ಒಂದರಿಂದ 3ನೇ ಪ್ರಾಥಮಿಕ ಶಾಲಾ ತರಗತಿಗಳ ಆರಂಭವನ್ನು ಮುಂದೂಡಲಾಗಿದೆ. ಜೊತೆಗೆ ನಗರದಲ್ಲಿ ನಡೆಯಬೇಕಿದ್ದ ಎಲ್ಲ ಕ್ರೀಡಾ ಚಟುವಟಿಕೆಗಳಿಗೂ ಕಡಿವಾಣ ಹಾಕಲಾಗಿದೆ.
ಕಳೆದ 24 ಗಂಟೆಗಳಲ್ಲಿ ಹೊರಗಿನಿಂದ ಬಂದವರಿಂದ 5 ಕೊರೊನಾ ಪ್ರಕರಣ ಪತ್ತೆಯಾಗಿವೆ. ದಿನದಲ್ಲಿ ಒಟ್ಟು 11 ಪ್ರಕರಣ ದೃಢಪಟ್ಟಿವೆ. ಈವರೆಗೆ ದೇಶದಲ್ಲಿ 83,075 ಕೊರೊನಾ ಪ್ರಕರಣ ಪತ್ತೆಯಾಗಿವೆ. 4,634 ಜನ ಮೃತಪಟ್ಟಿದ್ದಾರೆ ಎಂದು ನ್ಯಾಷನಲ್ ಹೆಲ್ಥ್ ಕಮೀಷನ್ ತಿಳಿಸಿದೆ.