ಲಿವರ್‌ಪೂಲ್ ವಿಶ್ವವಿದ್ಯಾಲಯದಲ್ಲಿ ಮತ್ತು ಬ್ರಿಟಿಷ್ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಪೋಸ್ಟ್ ಡಾಕ್ಟರಲ್ ರಿಸರ್ಚ್ ಅಸೋಸಿಯೇಟ್ ಆಗಿರುವ ಮ್ಯಾಥ್ಯೂ ಶಪ್ಲರ್ ಅವರು ಒಂದು ಆತಂಕಕಾರಿ ಮಾಹಿತಿಯನ್ನು ಹೊರಹಾಕಿದ್ದಾರೆ. ಒಳಾಂಗಣದಲ್ಲಿ ವಾಯುಮಾಲಿನ್ಯವನ್ನು ತಪ್ಪಿಸಬಹುದು ಎಂದು ನೀವು ಭಾವಿಸಿದ್ದರೆ ಅದು ವಾಸ್ತವವಲ್ಲ ಎಂದಿದ್ದಾರೆ.
ಹೌದು, ವಿಶ್ವದಾದ್ಯಂತ ಸಾಂಪ್ರದಾಯಿಕ ಇಂಧನಗಳಾದ ಕಟ್ಟಿಗೆ, ಇದ್ದಿಲು, ಕಲ್ಲಿದ್ದಲು, ಪ್ರಾಣಿಗಳ ಸಗಣಿ ಮತ್ತು ಗೋಧಿ ಒಣಹುಲ್ಲುಗಳಂತಹ ಸ್ಥಳೀಯ ಸುಡುವ ಇಂಧನಗಳನ್ನು ಬಳಸಿ ವಿವಿಧ ಕೆಲಸಗಳನ್ನು ಮಾಡುವುದರಿಂದ ಅವು ಸೂಸುವ ಹೊಗೆಯಿಂದಾಗಿ ವಾಯು ಮಾಲಿನ್ಯಕ್ಕೆ ಒಡ್ಡಲ್ಪಡುತ್ತಾರೆ. ಇಂತಹದರಿಂದಲೇ 3 ಶತಕೋಟಿಗೂ ಹೆಚ್ಚು ಜನರು ತಮ್ಮ ಮನೆಗಳಲ್ಲಿಯೇ ಇದ್ದರೂ ಹಾನಿಕಾರಕ ಗಾಳಿ ಉಸಿರಾಡುವ ಪರಿಸ್ಥಿತಿ ಇದೆ.
ಈ ಬೆಂಕಿಯಿಂದ ಉತ್ಪತ್ತಿಯಾಗುವ ಹೊಗೆ, ಮಸಿಯಿಂದ ಕೂಡಿರುತ್ತದೆ. ಇದನ್ನು ಕಪ್ಪು ಕಾರ್ಬನ್ ಎಂದೂ ಕರೆಯಲಾಗುತ್ತದೆ. ಈ ಕಡುಗಪ್ಪು ಕಣಗಳು ಸೂರ್ಯನಿಂದ ಯುವಿ ವಿಕಿರಣವನ್ನು ಹೀರಿಕೊಳ್ಳುತ್ತವೆ ಮತ್ತು ವಾತಾವರಣವನ್ನು ಬೆಚ್ಚಗಾಗಿಸುತ್ತವೆ. ಇದು ಹವಾಮಾನ ಬದಲಾವಣೆಗೆ ಕಾರಣವಾಗಿದೆ. ಆದರೆ, ಸಮಸ್ಯೆ ಅಲ್ಲಿಗೆ ಮುಗಿಯುವುದಿಲ್ಲ. ಕಪ್ಪು ಇಂಗಾಲವು PM2.5 ನ ಕೇವಲ ಒಂದು ಅಂಶವಾಗಿದೆ. ಇತರ ಮೂಲಗಳಾದ ಕಾರ್ ನಿಷ್ಕಾಸಗಳು, ಕಾರ್ಖಾನೆ ಕುಲುಮೆಗಳು ಮತ್ತು ತೆರೆದ ಬೆಂಕಿಯಿಂದ ಹೊರಹೊಮ್ಮುವ 2.5 ಮೈಕ್ರೊಮೀಟರ್‌ಗಳಿಗಿಂತ ಚಿಕ್ಕದಾದ ಕಣಕಣಗಳು ಇವಾಗಿವೆ. ಒಮ್ಮೆ ಉಸಿರಾಡಿದರೆ, ಈ ಸಣ್ಣ ಕಣಗಳು ದೇಹ ಹೊಕ್ಕು ಹೃದಯ ಮತ್ತು ಶ್ವಾಸಕೋಶದ ಮೇಲೆ ಪರಿಣಾಮ ಬೀರುತ್ತವೆ. ಆಸ್ತಮಾ ರೋಗಲಕ್ಷಣಗಳನ್ನು ಉಲ್ಬಣಗೊಳಿಸುತ್ತವೆ ಮತ್ತು ಹೃದಯಾಘಾತ, ಪಾರ್ಶ್ವವಾಯು, ನ್ಯುಮೋನಿಯಾ ಮತ್ತು ಶ್ವಾಸಕೋಶದ ಕ್ಯಾನ್ಸರ್ ಗೆ ಕಾರಣವಾಗಬಹುದು.
ಒಳಾಂಗಣ ಗಾಳಿಯು ಉಸಿರಾಡಲು ಸುರಕ್ಷಿತವೆನಿಸದಿದ್ದಾಗ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಕೆಲವು ಮಾರ್ಗಸೂಚಿಗಳನ್ನು ರಚಿಸಿದೆ. ಜೊತೆಗೆ ಈ ಸೂಕ್ಷ್ಮ ಕಣಗಳ ಸಾಂಧ್ರತೆಯನ್ನು ಘನ ಮೀಟರ್ 35 ಮೈಕ್ರೊಗ್ರಾಂಗೆ ಸೀಮಿತಗೊಳಿಸಲು ಶಿಫಾರಸು ಮಾಡುತ್ತದೆ.