ಇಸ್ಲಾಮಾಬಾದ್(ಪಾಕಿಸ್ತಾನ): ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ನೇತೃತ್ವದ ಮಧ್ಯಂತರ ಸರ್ಕಾರ ಆರಂಭವಾಗಿದೆ. ಈ ಕುರಿತು ಅಫ್ಘಾನಿಸ್ತಾನದ ನೆರೆಯ ರಾಷ್ಟ್ರಗಳು ಸಭೆ ನಡೆಸಿ, ಸೌಮ್ಯ ನೀತಿಗಳನ್ನು ತಾಲಿಬಾನ್ ಸರ್ಕಾರ ಅಳವಡಿಸಿಕೊಳ್ಳಬೇಕೆಂದು ಮತ್ತು ಎಲ್ಲಾ ಜನಾಂಗೀಯ ಗುಂಪುಗಳನ್ನು ಒಳಗೊಂಡ ಸರ್ಕಾರ ರಚಿಸಬೇಕೆಂದು ಮನವಿ ಮಾಡಿವೆ.
ಮಾನವ ಹಕ್ಕುಗಳನ್ನು ಗೌರವಿಸಿ: ತಾಲಿಬಾನ್ಗೆ ನೆರೆಯ ರಾಷ್ಟ್ರಗಳ ಮನವಿ
ಪಾಕಿಸ್ತಾನದ ಆಹ್ವಾನದ ಮೇರೆಗೆ ಚೀನಾ, ಇರಾನ್, ತಜಿಕಿಸ್ತಾನ, ಉಜ್ಬೇಕಿಸ್ತಾನ, ತುರ್ಕ್ಮೇನಿಸ್ತಾನದ ವಿದೇಶಾಂಗ ಮಂತ್ರಿಗಳು ಗುರುವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ಸೇರಿದ್ದರು. ಈ ವೇಳೆ ಅಫ್ಘಾನಿಸ್ತಾನದ ಪ್ರಸ್ತುತ ಸ್ಥಿತಿಗತಿಯ ಬಗ್ಗೆ ಚರ್ಚೆ ನಡೆಸಲಾಗಿದೆ.
ಸಭೆಯ ನಂತರ ಜಂಟಿ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದು, ಮುಕ್ತವಾದ ಸರ್ಕಾರವನ್ನು ತಾಲಿಬಾನ್ ರೂಪಿಸಬೇಕು, ನೆರೆಹೊರೆಯ ರಾಷ್ಟ್ರಗಳೊಂದಿಗೆ ಸ್ನೇಹಪರ ನೀತಿಗಳನ್ನು ಅಳವಡಿಸಿಕೊಳ್ಳಬೇಕು. ವಿವಿಧ ಜನಾಂಗೀಯ ಗುಂಪುಗಳು, ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಎಲ್ಲರ ಮೂಲಭೂತ ಮಾನವ ಹಕ್ಕುಗಳನ್ನು ಗೌರವಿಸಬೇಕು ಎಂದು ಸೂಚನೆ ನೀಡಿವೆ.
ವಿಶ್ವಸಂಸ್ಥೆ ಆಫ್ಘನ್ನಲ್ಲಿ ಶಾಂತಿ ಮತ್ತು ಪುನರ್ನಿಮಾರ್ಣದ ಜವಾವ್ದಾರಿ ತೆಗೆದುಕೊಳ್ಳಲಿ
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸದಸ್ಯ ರಾಷ್ಟ್ರಗಳು ಆರ್ಥಿಕ ಮತ್ತು ಮಾನವೀಯ ನೆರವು ನೀಡುವ ಮೂಲಕ ಅಫ್ಘಾನಿಸ್ತಾನದಲ್ಲಿ ಶಾಂತಿ ಮತ್ತು ಪುನರ್ನಿರ್ಮಾಣದ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು ಸಭೆಯಲ್ಲಿ ಭಾಗವಹಿಸಿದ ಎಲ್ಲಾ ರಾಷ್ಟ್ರಗಳ ಮಂತ್ರಿಗಳು ಸಲಹೆ ನೀಡಿದ್ದಾರೆ. ಅಂತಾರಾಷ್ಟ್ರೀಯ ಸಮುದಾಯವು ಅಫ್ಘಾನಿಸ್ತಾನದ ಜನರನ್ನು ಕೈಬಿಡಬಾರದು ಎಂದು ಈ ವೇಳೆ ಮನವಿ ಮಾಡಲಾಗಿದೆ.
ಅಫ್ಘಾನಿಸ್ತಾನದಲ್ಲಿ ಜನರಿಗೆ ಅಗತ್ಯ ನೆರವು ಮತ್ತು ಸಹಾಯವನ್ನು ಒದಗಿಸಲು ವಿಶ್ವಸಂಸ್ಥೆಯ ವಿವಿಧ ಸಂಘಟನೆಗಳು ಮತ್ತು ಇತರ ಅಂತರಾಷ್ಟ್ರೀಯ ಮಾನವೀಯ ಸಂಸ್ಥೆಗಳು ಅನುಮತಿ ನೀಡಬೇಕೆಂದು ಈ ವೇಳೆ ಮನವಿ ಮಾಡಲಾಯಿತು.
ಜಂಟಿ ಹೇಳಿಕೆಯಲ್ಲಿ ಏನಿದೆ?
ಅಫ್ಘಾನಿಸ್ತಾನದ ಸಾರ್ವಭೌಮತ್ವ, ಸ್ವಾತಂತ್ರ್ಯ ಮತ್ತು ಪ್ರಾದೇಶಿಕ ಸಮಗ್ರತೆ ಮತ್ತು ಅದರ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡದಿರುವುದಕ್ಕೆ ಬೆಂಬಲವನ್ನು ವ್ಯಕ್ತಪಡಿಸಿದ್ದು, ಮಾತ್ರವಲ್ಲದೇ ವಿಶ್ವಸಂಸ್ಥೆಯ ನಿಬಂಧನೆಗಳಿಗೆ ಅನುಸಾರವಾಗಿ ಅಫ್ಘಾನಿಸ್ತಾನದ ಭವಿಷ್ಯವನ್ನು ಅದರ ಜನರು ನಿರ್ಧರಿಸಬೇಕು ಎಂದು ರಾಷ್ಟ್ರಗಳು ಜಂಟಿ ಹೇಳಿಕೆ ನೀಡಿವೆ.
ಜೊತೆಗೆ ಅಫ್ಘಾನಿಸ್ತಾನದಲ್ಲಿ ಎಲ್ಲರನ್ನೂ ಒಳಗೊಂಡ ಸರ್ಕಾರ ರಚಿಸುವ ಪ್ರಯತ್ನವನ್ನು ಹಾಳು ಮಾಡಲು ದೇಶದ ಒಳಗೂ ಮತ್ತು ಹೊರಗೂ ಪ್ರಚೋದನೆ ಇರುವ ಸಾಧ್ಯತೆಯಿದೆ ಎಂದು ಅಫ್ಘಾನಿಸ್ತಾನದ ನೆರೆಹೊರೆಯ ರಾಷ್ಟ್ರಗಳು ಅಫ್ಘಾನಿಸ್ತಾನಕ್ಕೆ ಎಚ್ಚರಿಕೆ ನೀಡಿವೆ.
ಇದನ್ನೂ ಓದಿ: 2019ರ ಚುನಾವಣೆ ವೇಳೆ ಪ್ರಧಾನಿ ಟ್ವಿಟರ್ ಬಳಸಿಕೊಂಡಿದ್ದು ಹೇಗೆ ಗೊತ್ತಾ?: ಇಲ್ಲಿದೆ ಅಧ್ಯಯನ ವರದಿ