ಫಿಜಿ: ಜಾಗತಿಕವಾಗಿ ಏಷ್ಯಾ ಖಂಡದ ಬೆಳವಣಿಗೆಯ ಎಂಜಿನ್ ಮುಂದೆ ಸಾಗಬೇಕಾದರೆ ಏಷ್ಯಾ ಅಭಿವೃದ್ಧಿ ಬ್ಯಾಂಕ್ (ಎಡಿಬಿ) ತನ್ನ ಕಾರ್ಯಾಚರಣೆಯನ್ನು ಖಾಸಗಿ ವಲಯಕ್ಕೂ ವಿಸ್ತರಿಸಬೇಕು ಎಂದು ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಸುಭಾಷ್ ಚಂದ್ರ ಗರ್ಗ್ ಸಲಹೆ ನೀಡಿದ್ದಾರೆ.
ಎಡಿಬಿ ಗವರ್ನರ್ ಮಂಡಳಿ ಸಭೆಯಲ್ಲಿ ಮಾತನಾಡಿದ ಅವರು, ಮಾನವ ಬಂಡವಾಳ ಬಲಪಡಿಸುವ ಮತ್ತು ಸಮಾಜದ ಸುರಕ್ಷತೆಯನ್ನು ಅಭಿವೃದ್ಧಿಪಡಿಸುವತ್ತ ಗಮನ ಹರಿಸಬೇಕಾದ ಅವಶ್ಯಕತೆ ಇದೆ ಎಂದರು.
ಎಡಿಬಿ ತನ್ನ ನಿರ್ವಹಣೆ ಕಾರ್ಯಕ್ಷೇತ್ರವನ್ನು ಭಾರತದಂತಹ ರಾಷ್ಟ್ರಗಳಲ್ಲಿನ ಸಾಮಾಜಿಕ ವಲಯಗಳತ್ತ ಗಮನಹರಿಸಬೇಕು. ಸ್ಮಾರ್ಟ್ ಸಿಟಿಗಳ ನಿರ್ಮಾಣ, 24X7 ನೀರು ಪೂರೈಕೆ ಹಾಗೂ ವಿದ್ಯುತ್ ಸರಬರಾಜು, ಸಂಪರ್ಕ, ಹವಾಮಾನ ವೈಪರಿತ್ಯದ ಅಪಾಯ ತಗ್ಗಿಸುವತ್ತ ದೃಷ್ಟಿ ಹರಿಸಬೇಕು ಎಂಬ ಇಂಗಿತ ವ್ಯಕ್ತಪಡಿಸಿದರು.
ಎಡಿಬಿ ಸದಸ್ಯ ರಾಷ್ಟ್ರಗಳ ಆರ್ಥಿಕ ಸಂಪನ್ಮೂಲಗಳನ್ನು ಒದಗಿಸುವ ಮೂಲಕ ಅವುಗಳ ಬೆಳವಣಿಗೆ ಸಾಮರ್ಥ್ಯವನ್ನು ಹೆಚ್ಚಿಸಬೇಕು. ಖಾಸಗಿ ವಲಯಕ್ಕೂ ಎಡಿಬಿಯ ನೆರವಿನ ಹಸ್ತ ವಿಸ್ತರಿಸಬೇಕು. ಈಕ್ವಿಟಿ ಮತ್ತು ಮೂಲಸೌಕರ್ಯಗಳ ಮೇಲೆ ಹೆಚ್ಚಿನ ಬಂಡವಾಳ ಹೂಡಿದಾಗ ಖಾಸಗಿ ವಲಯದ ಅಭಿವೃದ್ಧಿ ಅರ್ಥಪೂರ್ಣವಾಗುತ್ತದೆ ಎಂದು ಗರ್ಗ್ ಅಭಿಪ್ರಾಯಪಟ್ಟಿದ್ದಾರೆ.