ನವದೆಹಲಿ : ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರು ಆಡಳಿತಕ್ಕೆ ಬಂದು ಅಟ್ಟಹಾಸ ಮೆರೆಯುತ್ತಿದ್ದು ಆ ದೇಶದಿಂದ ಸುರಕ್ಷಿತ ಪ್ರದೇಶಗಳಿಗೆ ಹೋಗಲು ಅಲ್ಲಿನ ಜನರು ಮುಂದಾಗುತ್ತಿದ್ದಾರೆ.
ಈ ನಡುವೆ ಭಾರತದಲ್ಲಿ ಆಶ್ರಯ ಪಡೆಯಲು ಆಗಸ್ಟ್ 1ರಿಂದ ಸೆಪ್ಟೆಂಬರ್ 11ರವರೆಗೆ ಒಟ್ಟು 736 ಮಂದಿ ಜನರು ಹೆಸರು ನೋಂದಾಯಿಸಿಕೊಂಡಿದ್ದಾರೆ ಎಂದು ವಿಶ್ವಸಂಸ್ಥೆಯ ನಿರಾಶ್ರಿತರ ಸಂಸ್ಥೆ (ಯುಎನ್‌ಹೆಚ್‌ಸಿಆರ್) ತಿಳಿಸಿದೆ.
ಭಾರತದಲ್ಲಿ ಆಶ್ರಯಕ್ಕಾಗಿ ನೋಂದಣಿ ಹಾಗೂ ಸಹಾಯ ಕೇಳುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಈ ಸಂಬಂಧ ಸರ್ಕಾರದೊಂದಿಗೆ ನಿರಂತರ ಸಂಪರ್ಕದಲ್ಲಿ ಇದ್ದೇವೆ. ವೀಸಾ ನೀಡಿಕೆ, ವಿಸ್ತರಣೆ, ನೆರವು ಹಾಗೂ ಪರಿಹಾರಗಳ ಬಗ್ಗೆ ಮಾತುಕತೆ ನಡೆಸುತ್ತಿದ್ದೇವೆ ಎಂದು ವಿಶ್ವಸಂಸ್ಥೆಯ ನಿರಾಶ್ರಿತರ ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ.
ಲಭ್ಯವಾಗಿರುವ ಅಂಕಿ-ಅಂಶಗಳ ಪ್ರಕಾರ, ಭಾರತದಲ್ಲಿ ವಿಶ್ವಸಂಸ್ಥೆ ನಿರಾಶ್ರಿತರ ಸಂಸ್ಥೆಗೆ ಸಂಬಂಧಿಸಿದ ಒಟ್ಟು 43,157 ಮಂದಿ ಇದ್ದಾರೆ. ಇದರಲ್ಲಿ 15,559 ಮಂದಿ ನಿರಾಶ್ರಿತರು ಹಾಗೂ ಆಶ್ರಯ ಪಡೆದ ಅಫ್ಘಾನಿಸ್ತಾನದ ಜನರಿದ್ದಾರೆ.
2021ರಲ್ಲಿ ಹೊಸದಾಗಿ ಭಾರತಕ್ಕೆ ಬಂದಿರುವ ಅಫ್ಘಾನ್ ವಿದ್ಯಾರ್ಥಿಗಳು, ಉದ್ಯಮಿಗಳು, ವೈದ್ಯಕೀಯ ಅಥವಾ ಇತರರು ಸೇರಿದ್ದಾರೆ. ವೀಸಾ ಹೊಂದಿರುವ ಜನರು ಪ್ರಸ್ತುತ ಪರಿಸ್ಥಿತಿಯಿಂದಾಗಿ ಸ್ವದೇಶಕ್ಕೆ ಹಿಂತಿರುಗಲು ಸಾಧ್ಯವಾಗಿಲ್ಲ.