ಕಾಬೂಲ್ (ಅಘ್ಫಾನಿಸ್ತಾನ): ಇಂದು ಬೆಳಗ್ಗೆ ಕಾಬೂಲ್ ನಗರದಲ್ಲಿ ನಡೆದ ಎರಡು ಮ್ಯಾಗ್ನೆಟಿಕ್ ಬಾಂಬ್ ಸ್ಫೋಟಗಳಲ್ಲಿ ಏಳು ಜನರು ಗಾಯಗೊಂಡಿದ್ದಾರೆ ಎಂದು ಪಜ್ವೋಕ್ ಅಫಘಾನ್ ನ್ಯೂಸ್ ಪೊಲೀಸರನ್ನು ಉಲ್ಲೇಖಿಸಿ ವರದಿ ಮಾಡಿದೆ.
ಘಟನೆಯಲ್ಲಿ ಯಾವುದೇ ಸಾವು - ನೋವುಗಳು ಸಂಭವಿಸಿಲ್ಲ. ಅಲ್ಲದೇ ಸ್ಫೋಟದ ಹೊಣೆಗಾರಿಕೆಯನ್ನು ಯಾವುದೇ ಉಗ್ರಗಾಮಿ ಗುಂಪುಗಳು ಹೊತ್ತಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಕಳೆದ ಜೂನ್. 27 ರಂದು ನಗರದಲ್ಲಿ ಬಾಂಬ್ ಸ್ಫೋಟ ನಡೆದಿತ್ತು. ಇದರಲ್ಲಿ ಅಫ್ಘಾನಿಸ್ತಾನ ಸ್ವತಂತ್ರ ಮಾನವ ಹಕ್ಕುಗಳ ಆಯೋಗದ(ಎಐಆರ್ಸಿ) ಇಬ್ಬರು ಸಿಬ್ಬಂದಿ ಸಾವನ್ನಪ್ಪಿದ್ದರು. ರಾಜಧಾನಿಯ ಬೊಟ್ಖಾಕ್ನಲ್ಲಿ ಬೆಳಗ್ಗೆ 7.45 ರ ಸುಮಾರಿಗೆ ಇಬ್ಬರು ಸಿಬ್ಬಂದಿ ಕೆಲಸಕ್ಕೆ ತೆರಳುತ್ತಿದ್ದಾಗ ಸ್ಫೋಟ ಸಂಭವಿಸಿತ್ತು ಎನ್ನಲಾಗುತ್ತಿದೆ.
ಮ್ಯಾಗ್ನೆಟಿಕ್ ಇಂಪ್ರೂವೈಸ್ಡ್ ಸ್ಫೋಟಕ ಸಾಧನವನ್ನು ಬಳಿಸಿ ಸಿಬ್ಬಂದಿಗಳು ಸಂಚರಿಸುತ್ತಿದ್ದ ಕಾರನ್ನು ಗುರಿಯಾಗಿಸಿಕೊಂಡು ಈ ಸ್ಫೋಟವನ್ನು ನಡೆಸಲಾಗಿತ್ತು ಎಂದು ಕಾಬೂಲ್ ಪೊಲೀಸ್ ವಕ್ತಾರ ಫಿರ್ದಾವ್ಸ್ ಫರಮಾರ್ಜ್ ಇಫೆ ಮಾಹಿತಿ ನೀಡಿದರು.