ಜಕಾರ್ತಾ: ಇಂಡೋನೇಷ್ಯಾದ ಉತ್ತರ ಮಲುಕು ಪ್ರಾಂತ್ಯದಲ್ಲಿ ಇಂದು ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 6.8 ತೀವ್ರತೆ ದಾಖಲಾಗಿದೆ.
ಇಂದು ಮಧ್ಯಾಹ್ನ 3.49ಕ್ಕೆ ಭೂಕಂಪನ ಸಂಭವಿಸಿದ್ದು, ಸುನಾಮಿ ಬರುವ ಯಾವುದೇ ಎಚ್ಚರಿಕೆ ನೀಡಲಾಗಿಲ್ಲ ಎಂದು ಹವಾಮಾನ ಮತ್ತು ಭೂಭೌತಶಾಸ್ತ್ರ ಸಂಸ್ಥೆ ತಿಳಿಸಿದೆ. ಪುಲಾವ್ ಮರೋಟೈ ಜಿಲ್ಲೆಯ ದಾರುಬಾ ಗ್ರಾಮದ ವಾಯುವ್ಯ ಭಾಗದಿಂದ 89 ಕಿ.ಮೀ ಅಂತರದಲ್ಲಿ ಮತ್ತು ಸಮುದ್ರ ತಳದ 112 ಕಿ.ಮೀ ಆಳದಲ್ಲಿ ಭೂಕಂಪನ ಕೇಂದ್ರ ಬಿಂದು ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಂಡೋನೇಷ್ಯಾವು 'ರಿಂಗ್ ಆಫ್ ಫೈರ್' (ಬೆಂಕಿಯ ಉಂಗುರ) ಪ್ರದೇಶದಲ್ಲಿದ್ದು, ಇದು ಪೆಸಿಫಿಕ್ ಮಹಾಸಾಗರದ ಭಾಗವಾಗಿದೆ. ಹೀಗಾಗಿ ಇಂಡೋನೇಷ್ಯಾವು ಆಗಾಗ ಭೂಕಂಪ ಮತ್ತು ಜ್ವಾಲಾಮುಖಿ ಸ್ಫೋಟಗಳಿಗೆ ಗುರಿಯಾಗುತ್ತಿರುತ್ತದೆ.
ದಶಕದ ಹಿಂದೆ ಸಂಭವಿಸಿದ ಭೀಕರ ಸುನಾಮಿಯಲ್ಲಿ ಇಂಡೋನೇಷ್ಯಾದಲ್ಲಿ ಅಪಾರ ಪ್ರಮಾಣದ ಜೀವ ಹಾನಿಯಾಗಿತ್ತು. ಲಂಕಾ, ಭಾರತವೂ ಇದರಿಂದ ತತ್ತರಿಸಿದ್ದವು.