ಢಾಕಾ, ಬಾಂಗ್ಲಾದೇಶ : ನದಿಯಲ್ಲಿ ದೋಣಿಯೊಂದು ಮುಳುಗಿ ಕನಿಷ್ಠ ನಾಲ್ವರು ಸಾವನ್ನಪ್ಪಿ, 10ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿರುವ ಘಟನೆ ಬಾಂಗ್ಲಾದೇಶದ ಢಾಕಾದ ಬಳಿ ನಡೆದಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಶೀತಲಕ್ಷ್ಯ ನದಿಯಲ್ಲಿ ಈ ಘಟನೆ ನಡೆದಿದ್ದು, ದೋಣಿಯಲ್ಲಿ ಕನಿಷ್ಠ 50 ಮಂದಿ ಇದ್ದರು ಎಂದು ತಿಳಿದು ಬಂದಿದೆ. ಮಧ್ಯಾಹ್ನ ಸುಮಾರು 2 ಗಂಟೆಗೆ ಸರಕು ಹಡಗಿಗೆ ದೋಣಿ ಡಿಕ್ಕಿ ಹೊಡೆದು, ನದಿಯಲ್ಲಿ ಮುಳುಗಿದೆ ಎಂದು ಢಾಕಾ ಟ್ರಿಬ್ಯೂನ್ ವರದಿ ಮಾಡಿದೆ.
ಮೃತರಲ್ಲಿ ಒಬ್ಬರನ್ನು ಜೋಯ್ನಾಲ್ ಅಬೆದಿನ್ ಎಂದು ಗುರುತಿಸಲಾಗಿದೆ. ಜೋಯ್ನಾಲ್ ಅಬದಿನ್ ಜೊತೆಗೆ ಇಬ್ಬರು ಮಹಿಳೆಯರು ಮತ್ತು ಮಗು ಸಾವನ್ನಪ್ಪಿರುವುದು ಗೊತ್ತಾಗಿದ್ದು, ಅವರನ್ನು ಇನ್ನೂ ಗುರುತು ಪತ್ತೆ ಹಚ್ಚುವ ಕಾರ್ಯನಡೆಯುತ್ತಿದೆ.
ಅಪಘಾತದ ನಂತರ ಬಾಂಗ್ಲಾದೇಶದ ಒಳನಾಡು ಜಲ ಸಾರಿಗೆ ಪ್ರಾಧಿಕಾರ (BIWTA), ನದಿ ಪೊಲೀಸ್, ನೌಕಾಪಡೆ ಮತ್ತು ಕರಾವಳಿ ಕಾವಲು ಪಡೆಗಳೊಂದಿಗೆ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ. ಅಗ್ನಿಶಾಮಕ ದಳದ ಡೈವಿಂಗ್ ತಂಡಗಳು ಸಹ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
ಇದನ್ನೂ ಓದಿ: ಕಾಶ್ಮೀರದಲ್ಲಿ ನಡೆದಿದ್ದಕ್ಕೆ ಪಾಕಿಸ್ತಾನ ಮತ್ತು ಭಯೋತ್ಪಾದನೆ ಕಾರಣ : ಗುಲಾಂ ನಬಿ ಆಜಾದ್