ತೆಹ್ರಾನ್(ಇರಾನ್): ಕೊರೊನಾ ವೈರಸ್ ಈಗಾಗಲೇ ನಾಲ್ಕು ಸಾವಿರ ಜನರನ್ನು ಬಲಿ ಪಡೆದಿದೆ. ಆದ್ರೆ ಈ ವೈರಸ್ನಿಂದ ಹಬ್ಬಿದ ವದಂತಿಯಿಂದಲೂ ಜನ ಪ್ರಾಣವನ್ನು ಕಳೆದುಕೊಳ್ಳುತ್ತಿದ್ದಾರೆ.
ಹೌದು, ಕೊರೊನಾ ವೈರಸ್ಗೆ ಕಳ್ಳಭಟ್ಟಿ ಸಾರಾಯಿ ಸಖತ್ ಆಗಿ ಕೆಲಸ ಮಾಡುತ್ತೆಂದು ಕೆಲವರು ವದಂತಿ ಹಬ್ಬಿಸಿದ್ದರು. ಇದನ್ನು ನಂಬಿದ ಕೆಲ ಜನ ಕಳ್ಳಭಟ್ಟಿ ಸಾರಾಯಿಯನ್ನು ಕುಡಿದಿದ್ದಾರೆ. ಇದರಿಂದಾಗಿ ಇರಾನ್ನಲ್ಲಿ 27 ಜನ ಸಾವನ್ನಪ್ಪಿದ್ದಾರೆ. ಕಳ್ಳಭಟ್ಟಿ ಸಾರಾಯಿ ಸೇವಿಸಿ 27 ಜನ ಬಲಿಯಾಗಿದ್ದರೆ, 218 ಜನರು ಸಾವು-ಬದುಕಿನ ಮಧ್ಯೆ ಹೋರಾಟ ನಡೆಸಿದ್ದಾರೆ ಎಂಬ ವರದಿ ಹರಿದಾಡುತ್ತಿದೆ.
ಚೀನಾ ಬಳಿಕ ಕೊರೊನಾ ವೈರಸ್ ತೀವ್ರತೆ ಹೆಚ್ಚಾಗಿರುವುದು ಇರಾನ್ನಲ್ಲಿ ಮಾತ್ರ. ಆ ದೇಶದಲ್ಲಿ ಇಲ್ಲಿಯವರೆಗೆ ಏಳು ಸಾವಿರಕ್ಕೂ ಹೆಚ್ಚು ಮಂದಿಗೆ ವೈರಸ್ ತಗುಲಿದೆ. ಸೋಮವಾರ ಒಂದೇ ದಿನಕ್ಕೆ 43 ಜನ ಸಾವನ್ನಪ್ಪಿದ್ದಾರೆ. ದಿನದಿಂದ ದಿನಕ್ಕೆ ಸಂತ್ರಸ್ತರ ಸಾವು ಹೆಚ್ಚಾಗುತ್ತಿರುವುದರಿಂದ ಅಲ್ಲಿನ ಜನರಲ್ಲಿ ತೀವ್ರ ಭಯ ಹುಟ್ಟಿಕೊಳ್ಳುತ್ತಿದೆ.
ಹೀಗಾಗಿ ಇಲ್ಲಿ ಕಳ್ಳಭಟ್ಟಿ ಸಾರಾಯಿ ಕೊರೊನಾ ವೈರಸ್ಗೆ ರಾಮಬಾಣದಂತೆ ಕೆಲಸ ಮಾಡುತ್ತೆ ಎಂಬ ವದಂತಿಗಳು ಹರಿದಾಡುತ್ತಿದ್ದವು. ಆದರಿಂದ ಕೆಲ ಜನರು ‘ನಮಗೆ ಕೊರೊನಾ ವೈರಸ್ ತಗುಲಿರಬಹುದೆಂದು ಅನುಮಾನಗೊಂಡು ಹಾಗೂ ಕೊರೊನಾ ವೈರಸ್ ಹರಡದಂತೆ ಮುನ್ನೆಚ್ಚರಿಕಾ ಕ್ರಮವಾಗಿ’ ಕಳ್ಳಭಟ್ಟಿ ಸೇವಿಸಿದ್ದಾರೆ ಎನ್ನಲಾಗ್ತಿದೆ.
ಕಳ್ಳಭಟ್ಟಿ ಸೇವನೆಯಿಂದಾಗಿ ಈ ದುರಂತ ಸಂಭವಿಸಿದ್ದು, 20 ಜನರು ಖುಜೆಸ್ತಾನ್ ಪ್ರಾಂತ್ಯ ಮತ್ತು ಏಳು ಜನ ಅಲ್ಬೋರ್ಜ್ ಪ್ರಾಂತ್ಯಕ್ಕೆ ಸೇರಿದವರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.