ವಾಷಿಂಗ್ಟನ್ : ಅಮೆರಿಕ ಸಂಯುಕ್ತ ಸಂಸ್ಥಾನದ 46ನೇ ಅಧ್ಯಕ್ಷರಾಗಿ 78 ವರ್ಷದ ಜೋ ಬೈಡನ್ ಮತ್ತು 49ನೇ ಉಪಾಧ್ಯಕ್ಷರಾಗಿ 56 ವರ್ಷದ ಭಾರತ ಮೂಲದ ಕಮಲಾ ಹ್ಯಾರೀಸ್ ಅವರು ಇಂದು (ಜನವರಿ 20) ಪ್ರಮಾಣ ವಚನ ಸ್ವೀಕರಿಸಿ ಅಧಿಕಾರದ ಗದ್ದುಗೆ ಏರಲಿದ್ದಾರೆ.
ಒಂದು ಕಾಲದಲ್ಲಿ ನಮ್ಮ ನೆಲವನ್ನು ಆಳಿದ್ದವರ ದೇಶದಲ್ಲಿ ನಮ್ಮವರೇ ಉಪಾಧ್ಯಕ್ಷರಾಗುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಕೋಟ್ಯಂತರ ಭಾರತೀಯರ ಕನಸು ಇಂದು ನನಸಾಗಲಿದೆ. ಆದರೆ, ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಅಧಿಕಾರ ಗಾಧಿಗೆ 2ನೇ ಬಾರಿಗೆ ಆಯ್ಕೆಯಾಗುವಲ್ಲಿ ಎಡವಿದ ಡೊನಾಲ್ಡ್ ಟ್ರಂಪ್ ನೆತ್ತಿ ಮೇಲೆ ವಾಗ್ದಂಡನೆ ತೂಗುಗತ್ತಿ ನೇತಾಡುತ್ತಿದೆ. ಅಮೆರಿಕದ ಕ್ಯಾಪಿಟಲ್ ಕಟ್ಟಡದಲ್ಲಿ ಹಿಂಸಾಚಾರಕ್ಕೆ ಪ್ರಚೋದಿಸಿದ ಹಿನ್ನೆಲೆ ಟ್ರಂಪ್ ವಿರುದ್ಧ ವಾಗ್ದಂಡನೆ ಮಾಡಲಾಗಿದೆ. ಡೆಮಾಕ್ರಟಿಕ್ ಪಕ್ಷದ ಮೂವರು ಸಂಸದರು ಟ್ರಂಪ್ ವಿರುದ್ಧ ದೋಷಾರೋಪಣಾ ಪಟ್ಟಿಯ ಕರಡನ್ನು ಅಮೆರಿಕ ಸಂಸತ್ತಿನಲ್ಲಿ ಮಂಡಿಸಿದ್ದರು. ಈ ವಾಗ್ದಂಡನೆ ನಿಲುವಳಿ ಚೆಂಡು ಸೆನೆಟ್ ಅಂಗಳದಲ್ಲಿದ್ದು, ಸೆನೆಟ್‌ನಲ್ಲಿ ಅದಕ್ಕೆ ಒಪ್ಪಿಗೆ ದೊರೆತರೆ ಟ್ರಂಪ್ರನ್ನು ಅಧಿಕಾರದಿಂದ ಕಿತ್ತೊಗೆಯಲಾಗುತ್ತದೆ.
ಎಲ್ಲರ ಚಿತ್ತ ಸ್ಪೀಕರ್ನತ್ತ : ಟ್ರಂಪ್ ಅಧಿಕಾರ ಹಸ್ತಾಂತರಿಸಿದ ಮತ್ತು ಜೋ ಬೈಡೆನ್ ಪ್ರಮಾಣ ವಚನ ಸ್ವೀಕರಿಸಿದ ಮರುಕ್ಷಣವೇ ಟ್ರಂಪ್ ವಿರುದ್ಧ ದೋಷಾರೋಪಣೆ ವಿಚಾರಣೆ ನಡೆಯಲಿದೆ. ಆದರೆ, ಅಷ್ಟು ಬೇಗನೇ ಪ್ರಕ್ರಿಯೆ ನಡೆಯುವುದು ಅನುಮಾನ ಎನ್ನುವ ಮಾತು ಕೇಳಿ ಬರುತ್ತಿವೆ.
ಆದರೆ, ವಿಚಾರಣೆ ಹೇಗೆ ಮುಂದುವರೆಯುತ್ತದೆ? ಸೆನೆಟ್ನ ಸದಸ್ಯರು ಟ್ರಂಪ್‌ಗೆ ಶಿಕ್ಷೆ ವಿಧಿಸಲು ಮತ ಚಲಾಯಿಸುತ್ತಾರೆಯೇ, ಇಲ್ಲವೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಇಂದು ಮಧ್ಯಾಹ್ನ 1ಗಂಟೆಗೆ ವಿಚಾರಣೆ ಪ್ರಾರಂಭವಾಗಲಿದೆ. ವಿಚಾರಣೆಯಲ್ಲಿ ಸ್ಪೀಕರ್ ನ್ಯಾನ್ಸಿ ಪೆಲೋಸಿ ಅವರು ಯಾವ ಕ್ರಮಕೈಗೊಳ್ಳಲಿದ್ದಾರೆ ಎಂಬುದರ ಕಡೆ ಎಲ್ಲರ ಚಿತ್ತ ನೆಟ್ಟಿದೆ.
ಡೆಮಾಕ್ರಟಿಕ್ ಸಂಸದರಾದ ಜೇಮೀ ರಾಸ್ಕಿನ್, ಡೇವಿಡ್ ಸಿಸಿಲಿನ್ ಮತ್ತು ಟೆಡ್ ಲಿಯು ವಾಗ್ದಂಡನೆಯ ಕರಡು ರಚಿಸಿದ್ದು, ವಾಗ್ದಂಡನೆ ಪ್ರಸ್ತಾವದ ಪರ 232 ಸಂಸದರು ಮತ ಚಲಾಯಿಸಿದ್ದಾರೆ. ಪ್ರಸ್ತಾವದ ವಿರುದ್ಧ 197 ಸಂಸದರು ವೋಟ್ ಮಾಡಿದ್ದಾರೆ. ರಿಪಬ್ಲಿಕನ್ ಪಕ್ಷದ 10 ಸಂಸದರು ಟ್ರಂಪ್ ವಿರುದ್ಧ ಮತಚಲಾಯಿಸಿದ್ದಾರೆ.
ಹಿಂಸೆಗೆ ಕುಮ್ಮಕ್ಕು : ಹಿಂಸೆಗೆ ಪ್ರಚೋದಿಸಿದ ಅಪಾದನೆಯನ್ನು ಟ್ರಂಪ್ ಮೇಲೆ ಮಾಡಲಾಗಿದೆ. ಈ ಮೂಲಕ ಸದನವು ಟ್ರಂಪ್ ವಿರುದ್ಧ ಎರಡನೇ ಬಾರಿ ವಾಗ್ದಂಡನೆ ಆರೋಪ ಕೇಳಿ ಬಂದಂತಾಗಿದೆ. ಜೋ ಬೈಡನ್ ಆಯ್ಕೆ ವಿರೋಧಿಸಿ ಟ್ರಂಪ್ ಬೆಂಬಲಿಗರು ಜನವರಿ 7ರಂದು ಕ್ಯಾಪಿಟಲ್ ಕಟ್ಟಡಕ್ಕೆ ಮುತ್ತಿಗೆ ಹಾಕಿದ್ದರು. ಈ ವೇಳೆ ನಡೆದ ಘರ್ಷಣೆಯಲ್ಲಿ ನಾಲ್ವರು ಮೃತಪಟ್ಟಿದ್ದರು.
50ಕ್ಕೂ ಅಧಿಕ ಮಂದಿಯನ್ನು ಬಂಧಿಸಲಾಗಿತ್ತು. ಈ ಕುರಿತು ದೋಷಾರೋಪಣೆ ಸಲ್ಲಿಸಲಾಗಿತ್ತು. ಸ್ಪೀಕರ್ ವರದಿಯನ್ನು ಸ್ವೀಕರಿಸಿದ ಕೂಡಲೇ ವಿಚಾರಣೆ ನಡೆಸಬೇಕು ಎಂದು ಸೆನೆಟ್ ನಿಯಮ ಹೇಳುತ್ತದೆ. ಆದರೆ, ಸದನವು ದೋಷಾರೋಪಣೆ ಯಾವಾಗ ತಲುಪಿಸುತ್ತೋ ಗೊತ್ತಿಲ್ಲ ಎಂದು ನ್ಯಾನ್ಸಿ ಪೆಲೋಸಿ ಹೇಳಿದ್ದಾರೆ.
2ನೇ ಬಾರಿ ವಾಗ್ದಂಡನೆಗೆ ಗುರಿಯಾದ ಟ್ರಂಪ್ : ಅಮೆರಿಕ ಸಂಸತ್ತಿನ ಇತಿಹಾಸದಲ್ಲೇ ಎರಡನೇ ಬಾರಿ ದೋಷಾರೋಪಣೆಗೆ ಗುರಿಯಾದ ಮೊದಲ ಅಧ್ಯಕ್ಷ ಎಂಬ ಕುಖ್ಯಾತಿಗೆ ಡೊನಾಲ್ಡ್ ಟ್ರಂಪ್ ಗುರಿಯಾಗಿದ್ದಾರೆ. ಆದರೆ, ದೋಷಾರೋಪಣೆಗೆ ಹೆಸರಾದ ಪ್ರಥಮ ಅಧ್ಯಕ್ಷರಲ್ಲ. ಟ್ರಂಪ್ಗೂ ಮೊದಲು ಅಮೆರಿಕದ ಇಬ್ಬರು ಅಧ್ಯಕ್ಷರು ದೋಷಾರೋಪಣೆಗೆ ಗುರಿಯಾಗಿದ್ದರು. ಆದರೆ, ಎರಡು ಬಾರಿ ಆಗಿರಲಿಲ್ಲ. 1868ರಲ್ಲಿ ಆ್ಯಂಡ್ರ್ಯೂ ಜಾನ್ಸನ್ ಹಾಗೂ 1998ರಲ್ಲಿ ಬಿಲ್ ಕ್ಲಿಂಟನ್ ಅವರು ವಾಗ್ದಂಡನೆಗೆ ಗುರಿಯಾಗಿದ್ದರು.
ಒಟ್ಟು ವಾಗ್ದಂಡನೆಗೆ ಗುರಿಯಾದ ಮೂರನೇ ಅಧ್ಯಕ್ಷ ಎಂಬುದಕ್ಕೆ ಟ್ರಂಪ್ ಅಪಕೀರ್ತಿಗೆ ಒಳಗಾಗಿದ್ದಾರೆ. 2019ರಲ್ಲಿ ಟ್ರಂಪ್ ಅವರು ಉಕ್ರೇನ್ ಅಧ್ಯಕ್ಷರೊಂದಿಗೆ ಅವ್ಯವಹಾರ ನಡೆಸಿದ್ದರು ಎಂಬ ಆರೋಪ ಕೂಡ ಹೊಂದಿದ್ದರು. ಅಧಿಕಾರ ದುರುಪಯೋಗದ ವಿರುದ್ಧ ತನಿಖೆ ನಡೆಸುವಂತೆ ಬೈಡನ್ ಅಂದು ಒತ್ತಾಯಿಸಿದ್ದರು. ವಾಗ್ದಂಡನೆ ನಿರ್ಣಯವನ್ನು ಅಮೆರಿಕದ ಸೆನೆಟ್‌ನಲ್ಲಿ ವಿಚಾರಣೆಗೆ ಎತ್ತಿಕೊಳ್ಳಲಾಗುತ್ತದೆ. ವಿಚಾರಣೆಯ ನಂತರ ವಾಗ್ದಂಡನೆ ನಿರ್ಣಯವನ್ನು ಮತಕ್ಕೆ ಹಾಕಲಾಗುತ್ತದೆ. ಸೆನೆಟ್‌ನಲ್ಲಿ 3ನೇ ಎರಡರಷ್ಟು ಬಹುಮತ ಬಂದ್ರೆ ಮಾತ್ರ ವಾಗ್ದಂಡನೆ ಜಾರಿಯಾಗುತ್ತದೆ.