ನವದೆಹಲಿ: ಹವಾಮಾನ ಅಥವಾ ವಾತಾವರಣದಲ್ಲಿ ಆಗುವ ಬದಲಾವಣೆ ಕೊರೊನಾ ಹರಡುವಿಕೆಯ ಮೇಲೆ ಯಾವುದೇ ಪರಿಣಾಮ ಬೀರಿಲ್ಲವೆಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ಇದರ ಜೊತೆಗೆ ಕೊರೊನಾ ಹರಡುವ ಮಾದರಿಗಳಲ್ಲಿ ಬದಲಾವಣೆಯಾಗುವ ಸಾಧ್ಯತೆ ಇದೆ ಎಂದು ಇದೇ ವೇಳೆ ವಿಶ್ವ ಆರೋಗ್ಯ ಸಂಸ್ಥೆ ಅಭಿಪ್ರಾಯಪಟ್ಟಿದೆ.
ಸದ್ಯ ಜಗತ್ತಿನಾದ್ಯಂತ ಕೊರೊನಾ ಸೋಂಕಿತರ ಸಂಖ್ಯೆ ಅತ್ಯಂತ ವೇಗವಾಗಿ ಹೆಚ್ಚಾಗುತ್ತಿದೆ. ಈವರೆಗೆ 1 ಕೋಟಿ 71 ಲಕ್ಷಕ್ಕೂ ಹೆಚ್ಚು ಮಂದಿ ಕೋವಿಡ್ ವೈರಸ್ ಸೋಂಕಿಗೆ ಒಳಗಾಗಿದ್ದಾರೆ.
ಇದುವರೆಗೆ 6,69,231 ಮಂದಿ ಸೋಂಕಿಗೆ ಬಲಿಯಾಗಿದ್ದು, ಒಂದು ಕೋಟಿಗೂ ಹೆಚ್ಚು ಮಂದಿ ಸೋಂಕಿಗೆ ಚಿಕಿತ್ಸೆ ಪಡೆದು ಗುಣಮುಖರಾಗಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ.
ಬ್ರೆಜಿಲ್ ದೇಶವೊಂದರಲ್ಲೇ ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ 90 ಸಾವಿರ ದಾಟಿದೆ. ಸುಮಾರು 25 ಲಕ್ಷ ಮಂದಿ ಈ ರಾಷ್ಟ್ರದಲ್ಲಿ ಸೋಂಕಿಗೆ ಒಳಗಾಗಿದ್ದಾರೆ. ದಿನವೊಂದಕ್ಕೆ 70 ಸಾವಿರ ಸೋಂಕಿತರು ಪತ್ತೆಯಾಗಿರುವುದು ಅಲ್ಲಿನ ದಾಖಲೆಯಾಗಿದೆ.
ಅಮೆರಿಕದಲ್ಲಿ ಒಂದೂವರೆ ಲಕ್ಷ ಮಂದಿ ಕೋವಿಡ್ಗೆ ಬಲಿಯಾಗಿದ್ದಾರೆ ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ ಮಾಹಿತಿ ನೀಡಿದೆ. ಇಲ್ಲಿ 43 ಲಕ್ಷಕ್ಕೂ ಹೆಚ್ಚು ಮಂದಿ ಕೊರೊನಾ ಸೋಂಕಿತರಿದ್ದು, ನ್ಯೂಯಾರ್ಕ್ ರಾಜ್ಯವೊಂದರಲ್ಲೇ 32,658 ಮಂದಿ ಸಾವನ್ನಪ್ಪಿದ್ದಾರೆ.
ಕೊರೊನಾ ಆರಂಭವಾದ ಚೀನಾದಲ್ಲಿಯೂ ಕೂಡಾ ಮತ್ತೆ ಸೋಂಕಿತರು ಪತ್ತೆಯಾಗುತ್ತಿದ್ದಾರೆ. ಕ್ಸಿ ಜಿಯಾಂಗ್ ಪ್ರಾಂತ್ಯದಲ್ಲಿ 105 ಸೋಂಕು ಪ್ರಕರಣಗಳು ಹೊಸದಾಗಿ ಪತ್ತೆಯಾಗಿವೆ. ವಾಯುವ್ಯ ಚೀನಾದಲ್ಲಿ 96 ಸೋಂಕಿತರು ಪತ್ತೆಯಾಗಿದ್ದು, ಬೀಜಿಂಗ್ನಲ್ಲಿ ಒಂದು ಪ್ರಕರಣ ಪತ್ತೆಯಾಗಿದೆ.