ವಾಷಿಂಗ್ಟನ್: ಅಮೆರಿಕದಲ್ಲಿ ಕೋವಿಡ್-19 ಎರಡನೇ ಅಲೆ ಪ್ರಾರಂಭವಾಗಲಿದ್ದು, ಇಂದಿಗಿಂತಲೂ ಅತ್ಯಂತ ಕೆಟ್ಟ ಪರಿಸ್ಥಿತಿ ಎದುರಾಗುವ ಸಾಧ್ಯತೆ ಇದೆ. ಕಾಕತಾಳಿಯ ಎಂಬಂತೆ ದೇಶದಲ್ಲಿ ಜ್ವರದ ಸೀಸನ್ ಪ್ರಾರಂಭವಾಗುವ ಸಮಯದಲ್ಲೇ ಇದೂ ಕೂಡ ಪ್ರಾರಂಭವಾಗಲಿದೆ ಎಂದು ಅಮೆರಿಕದ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (ಸಿಡಿಸಿ) ನಿರ್ದೇಶಕರು ಹೇಳಿದ್ದಾರೆ.
ಮುಂದಿನ ಚಳಿಗಾಲದಲ್ಲಿ ನಮ್ಮ ರಾಷ್ಟ್ರವು ಹಿಂದೆಂದಿಗಿಂತಲೂ ಹೆಚ್ಚು ಕಷ್ಟಕರವಾದ ವೈರಸ್ನ ದಾಳಿಗೆ ತುತ್ತಾಗುವ ಸಾಧ್ಯತೆ ಇದೆ ಎಂದು ಸಿಡಿಸಿ ನಿರ್ದೇಶಕ ರಾಬರ್ಟ್ ರೆಡ್ಫೀಲ್ಡ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಅಮೆರಿಕದಲ್ಲಿ ಸಾಂಕ್ರಾಮಿಕ ಜ್ವರ ಮತ್ತು ಕೊರೊನಾ ಒಂದೇ ಸಮಯದಲ್ಲಿ ಕಾಣಿಸಿಕೊಳ್ಳಲಿದ್ದು ನಮ್ಮ ಆರೋಗ್ಯ ರಕ್ಷಣಾ ವ್ಯವಸ್ಥೆಯಲ್ಲಿ ಸಹಿಸಲಾಗದ ಒತ್ತಡ ಉಂಟಾಗುತ್ತದೆ ಎಂದಿದ್ದಾರೆ.
ಇನ್ನು ಲಾಕ್ಡೌನ್ ಹಿಂಪಡೆಯುವಂತೆ ಒತ್ತಾಯಿಸಿ ನಡೆಯುತ್ತಿರುವ ಪ್ರತಿಭಟನೆ ಬಗ್ಗೆ ಮಾತನಾಡಿದ ಅವರು. ಇದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ. ಅಮೆರಿಕ ಅಧ್ಯಕ್ಷರೇ ಇಂಥ ಪ್ರತಿಭಟನೆಗಳನ್ನು ಪ್ರೋತ್ಸಾಹಿಸುವ ಟ್ವೀಟ್ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
ಹೀಗಿದ್ದರೂ ಕೂಡ 20 ರಾಜ್ಯಗಳು ಶಿಘ್ರದಲ್ಲೆ ತಮ್ಮ ಆರ್ಥಿಕ ಚಟುವಟಿಕೆಯನ್ನು ಪ್ರಾರಂಭಿಸಲಿವೆ ಎಂದು ಟ್ರಂಪ್ ಹೇಳಿದ್ದಾರೆ. ಅಮೆರಿಕದಲ್ಲಿ ಇಲ್ಲಿಯವರೆಗೆ 8 ಲಕ್ಷಕ್ಕೂ ಹೆಚ್ಚು ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು ಸುಮಾರು 45 ಸಾವಿರ ಜನರು ಸಾವಿಗೀಡಾಗಿದ್ದಾರೆ.