ವಾಷಿಂಗ್ಟನ್ : ಇಂದಿನ 21ನೇ ಶತಮಾನದಲ್ಲಿ ಚೀನಾದ "ಪರಭಕ್ಷಕ ದೃಷ್ಟಿಕೋನ"ಕ್ಕೆ ಯಾವುದೇ ಸ್ಥಾನವಿಲ್ಲ ಎಂದಿರುವ ಟ್ರಂಪ್ ಆಡಳಿತ, ದಕ್ಷಿಣ ಚೀನಾ ಸಮುದ್ರದಲ್ಲಿ ಘೋಷಿಸಿರುವ ಪ್ರಾದೇಶಿಕ ಹಕ್ಕುಗಳನ್ನು ತಿರಸ್ಕರಿಸಿದೆ ಮತ್ತು ಚೀನಾಕ್ಕೆ ಈ ವಿಚಾರದಲ್ಲಿ ಏಕಪಕ್ಷೀಯ ನಿರ್ಧಾರ ಕೈಗೊಳ್ಳಲು ಯಾವುದೇ ಕಾನೂನು ಆಧಾರಗಳಿಲ್ಲ ಎಂದು ಹೇಳಿದೆ.
"ದಕ್ಷಿಣ ಚೀನಾ ಸಮುದ್ರವನ್ನು ತನ್ನ ಸಮುದ್ರ ಪ್ರದೇಶವೆಂದು ಪರಿಗಣಿಸಲು ಚೀನಾಕ್ಕೆ ಜಗತ್ತು ಅನುಮತಿಸುವುದಿಲ್ಲ. ಅಮೆರಿಕ ಆಗ್ನೇಯ ಏಷ್ಯಾದ ಮಿತ್ರರಾಷ್ಟ್ರಗಳಿಗೆ ಅಂತಾರಾಷ್ಟ್ರೀಯ ಕಾನೂನಿನಡಿ ಅವರ ಸಾರ್ವಭೌಮ ಹಕ್ಕುಗಳನ್ನು ರಕ್ಷಿಸುವಲ್ಲಿ ಸದಾ ಬೆಂಬಲವಾಗಿ ನಿಂತಿದೆ ಎಂದು ಯುಎಸ್ ರಾಜ್ಯ ಕಾರ್ಯದರ್ಶಿ ಮೈಕ್ ಪೊಂಪಿಯೊ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದಕ್ಷಿಣ ಚೀನಾ ಸಮುದ್ರ ಪ್ರದೇಶದಲ್ಲಿ ಚೀನಾ ಕಾನೂನು ಬದ್ಧವಾಗಿ ಎಕ್ಸ್‌ಕ್ಲ್ಯೂಸಿವ್ ಎಕನಾಮಿಕ್ ಝೋನ್ (ಇಇಝೆಡ್) ಸ್ಥಾಪಿಸಲು ಸಾಧ್ಯವಿಲ್ಲ. ಅದಕ್ಕೆ ನಾವು ಅನುಮತಿಸುವುದಿಲ್ಲ. 12 ನಾಟಿಕಲ್ ಮೈಲಿ ವ್ಯಾಪ್ತಿ ಹೊರತುಪಡಿಸಿ ಸ್ಪ್ರಾಟ್ಲಿ ದ್ವೀಪಗಳ ಮೇಲೆ ಸಾರ್ವಭೌಮತ್ವ ಸಾಧಿಸುವ ಚೀನಾದ ಯಾವುದೇ ವಾದವನ್ನು ಯುಎಸ್ ತಿರಸ್ಕರಿಸುತ್ತದೆ. ಜೇಮ್ಸ್ ಶೋಲ್‌ಗೆ ಮತ್ತು ಚೀನಾಕ್ಕೆ ಯಾವುದೇ ಕಾನೂನುಬದ್ಧ ಪ್ರಾದೇಶಿಕ ಅಥವಾ ಕಡಲ ಹಕ್ಕು ಇಲ್ಲ ಎಂದು ಪೊಂಪಿಯೊ ಹೇಳಿದ್ದಾರೆ.
"ನಾವು ಸ್ಪಷ್ಟಪಡಿಸುತ್ತಿದ್ದೇವೆ, ದಕ್ಷಿಣ ಚೀನಾ ಸಮುದ್ರದ ಬಹುಪಾಲು ಕಡಲಾಚೆಯ ಸಂಪನ್ಮೂಲಗಳಿಗೆ ಚೀನಾ ಹಕ್ಕು ಸಾಧಿಸುತ್ತಿರುವುದು ಸಂಪೂರ್ಣ ಕಾನೂನುಬಾಹಿರವಾಗಿದೆ. ಇದನ್ನು ನಿಯಂತ್ರಿಸಲು ಕ್ರಮಕೈಗೊಳ್ಳಲಾಗುತ್ತಿದೆ. ದಕ್ಷಿಣ ಚೀನಾ ಸಮುದ್ರದಲ್ಲಿ ಶಾಂತಿ ಮತ್ತು ಸ್ಥಿರತೆ ಕಾಪಾಡಿಕೊಳ್ಳಲು, ಸಮುದ್ರ ಪ್ರದೇಶದ ಸ್ವಾತಂತ್ರ್ಯವನ್ನು ಅಂತಾರಾಷ್ಟ್ರೀಯ ಕಾನೂನಿಗೆ ಅನುಗುಣವಾಗಿ ಎತ್ತಿಹಿಡಿಯಲು, ಸರಾಗವಾಗಿ ವಾಣಿಜ್ಯ ವ್ಯವಹಾರಗಳು ನಡೆಯಲು ಮತ್ತು ವಿವಾದಗಳನ್ನು ಬಗೆಹರಿಸುವ ಸಲುವಾಗಿ ಬಲವಂತದ ಪ್ರಯತ್ನಗಳನ್ನು ಯುಎಸ್ ವಿರೋಧಿಸುತ್ತದೆ ಎಂದು ಪೊಂಪಿಯೊ ಹೇಳಿದ್ದಾರೆ.