ವಾಷಿಂಗ್ಟನ್: ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ 1 ಗಂಟೆ 25 ನಿಮಿಷಗಳ ಮಟ್ಟಿಗೆ ಯುಎಸ್ ಅಧ್ಯಕ್ಷೆಯಾಗಿ ಸೇವೆ ಸಲ್ಲಿಸುವ ಅವಕಾಶ ಸಿಕ್ಕಿದೆ.
ಅಧ್ಯಕ್ಷ ಜೋ ಬೈಡನ್ ಶುಕ್ರವಾರ ಕೊಲೊನೋಸ್ಕೋಪಿ ಸಮಯದಲ್ಲಿ ಅರಿವಳಿಕೆ ತೆಗೆದುಕೊಳ್ಳುತ್ತಿದ್ದಾರೆ. ಹೀಗಾಗಿ ಆ ಸಮಯದಲ್ಲಿ ಕಮಲಾ ಅವರು ಅಮೆರಿಕದ ಹಂಗಾಮಿ ಅಧ್ಯಕ್ಷರಾಗಲಿದ್ದಾರೆ ಎಂದು ಶ್ವೇತಭವನದ ಮಾಧ್ಯಮ ಕಾರ್ಯದರ್ಶಿ ಜೆನ್ ಸಾಕಿ ಹೇಳಿದ್ದಾರೆ. ಸ್ಥಳೀಯ ಕಾಲಮಾನದ ಪ್ರಕಾರ ಬೈಡೆನ್ ಶುಕ್ರವಾರ ಬೆಳಗ್ಗೆ ವಾಷಿಂಗ್ಟನ್‌ನಲ್ಲಿರುವ ಆಸ್ಪತ್ರೆಗೆ ಸಾಮಾನ್ಯ ವೈದ್ಯಕೀಯ ಪರೀಕ್ಷೆಗಾಗಿ ತೆರಳಿಲಿದ್ದಾರೆ. ಬೆಳಗ್ಗೆ 10.10 ನಿಮಿಷಕ್ಕೆ ಅಧಿಕಾರವನ್ನು ಹಸ್ತಾಂತರ ಮಾಡಲಿರುವ ಅವರು 11.35ಕ್ಕೆ ಮರಳಿ ವಾಪಸ್ ಪಡೆಯಲಿದ್ದಾರೆ.
2002 ಮತ್ತು 2007ರಲ್ಲಿ ಅಂದಿನ ಅಮೆರಿಕ ಅಧ್ಯಕ್ಷ ಜಾರ್ಜ್ ಡಬ್ಲ್ಯೂ ಬುಷ್ ಕೂಡ ಇದೇ ರೀತಿ ಮಾಡಿದ್ದರು ಎಂದು ಸಾಕಿ ವಿವರಿಸಿದ್ದಾರೆ. ಸಂವಿಧಾನದ ಪ್ರಕಾರ ಬೈಡನ್ ಅವರು ಕಮಲ ಹ್ಯಾರಿಸ್‌ಗೆ ಅಧ್ಯಕ್ಷ ಸ್ಥಾನವನ್ನು ಹಸ್ತಾಂತರಿಸಲಿದ್ದಾರೆ. ಆ ಸಮಯದಲ್ಲಿ ಅವರು ಉಪಾಧ್ಯಕ್ಷ ಸ್ಥಾನದಿಂದ ಕೆಳಗಿಳಿಯುತ್ತಾರೆ ಎಂದು ಹೇಳಲಾಗಿದೆ.
78 ವರ್ಷದ ಬೈಡನ್ ಅವರು ಕೊನೆಯ ಬಾರಿಗೆ 2019ರಲ್ಲಿ ಆರೋಗ್ಯ ಪರೀಕ್ಷೆಗೆ ಒಳಗಾಗಿದ್ದರು. ಆಗ ಅವರು ಪೂರ್ಣ ಆರೋಗ್ಯ ಹೊಂದಿದ್ದು, ಅಧ್ಯಕ್ಷ ಸ್ಥಾನಕ್ಕೆ ಅರ್ಹರು ಎಂದು ವೈದ್ಯರು ತಿಳಿಸಿದ್ದರು. ಶನಿವಾರ 79ನೇ ವಂಸತಕ್ಕೆ ಕಾಲಿಡುತ್ತಿದ್ದಾರೆ. ಈ ವಯಸ್ಸಿನಲ್ಲಿ ಅಮೆರಿಕ ಅಧ್ಯಕ್ಷ ಹುದ್ದೆಯನ್ನು ಅಲಂಕರಿಸಿದ ಮೊದಲ ವ್ಯಕ್ತಿ ಎಂಬ ದಾಖಲೆಗೂ ಬೈಡನ್ ಪಾತ್ರರಾಗುತ್ತಿದ್ದಾರೆ.
ಅಮೆರಿಕ ಸಂವಿಧಾನದ 25 ನೇ ತಿದ್ದುಪಡಿಯ ಪ್ರಕಾರ, ಜೋ ಬೈಡನ್ ಅವರು ಸೆನೆಟ್ ಮತ್ತು ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಸ್ಪೀಕರ್‌ಗೆ ಮೊದಲು ಪತ್ರವನ್ನು ಸಲ್ಲಿಸುತ್ತಾರೆ. ಹ್ಯಾರಿಸ್ ಅವರನ್ನು ಮಧ್ಯಂತರ ಅಧ್ಯಕ್ಷರನ್ನಾಗಿ ನೇಮಿಸುತ್ತಾರೆ. ಅವರು ಔಷಧವನ್ನು ತೆಗೆದುಕೊಳ್ಳುವ ಮೊದಲು ತಮ್ಮ ಕರ್ತವ್ಯಗಳನ್ನು ನಿರ್ವಹಿಸಲು ಸಾಧ್ಯವಾಗುವುದಿಲ್ಲ ಎಂದು ಹೇಳಿದ್ದಾರೆ.
ಕಮಲಾ ಹ್ಯಾರಿಸ್ ಮತ್ತೊಂದು ದಾಖಲೆ
ಕಮಲಾ ಅವರು ಅಮೆರಿಕದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ ಮೊದಲ ಕಪ್ಪು ಮಹಿಳೆ ಹಾಗೂ ದಕ್ಷಿಣ ಏಷ್ಯಾ ಮೂಲದವರು ಎಂಬ ಅಪರೂಪದ ಹಿರಿಮೆಯನ್ನು ಈಗಾಗಲೇ ಸಾಧಿಸಿದ್ದಾರೆ. ಇದೀಗ ಹಂಗಾಮಿ ಅಧ್ಯಕ್ಷೆಯಾಗಿ ಅಧಿಕಾರ ಸ್ವೀಕರಿಸಿ ಹೊಸ ಇತಿಹಾಸ ಸೃಷ್ಟಿಸಲಿದ್ದಾರೆ.