ಮಿಷನ್ (ಅಮೆರಿಕ): ಯುಎಸ್ ಸರ್ಕಾರ ಏಳು ದಶಕಗಳ ಬಳಿಕ ಮಹಿಳಾ ಕೈದಿಯೊಬ್ಬಳಿಗೆ ಅತ್ಯಂತ ಕಠಿಣವಾದ ಮರಣದಂಡನೆ ಶಿಕ್ಷೆ ವಿಧಿಸಿದೆ. ಈ ಮೂಲಕ ದೇಶದ 46ನೇ ಅಧ್ಯಕ್ಷರಾಗಿ ಜೋ ಬೈಡನ್ ಪ್ರಮಾಣವಚನ ಸ್ವೀಕಾರಕ್ಕೂ ಒಂದು ವಾರಕ್ಕೂ ಮುನ್ನ ಆಕೆ ನೇಣುಗಂಬಕ್ಕೆ ಏರಲಿದ್ದಾಳೆ ಎಂದೇ ಭಾವಿಸಲಾಗಿತ್ತು. ಆದ್ರೆ ಅಲ್ಲಿನ ನ್ಯಾಯಾಲಯ ಶಿಕ್ಷೆಗೆ ತಡೆ ನೀಡಿ ಆಕೆಗೆ ತಾತ್ಕಾಲಿಕ ರಿಲೀಫ್ ಕೊಟ್ಟಿದೆ. ಇಷ್ಟಕ್ಕೂ, ಆಕೆ ಮಾಡಿರುವಂಥ ಘನಘೋರವಾದ ಕೃತ್ಯ ಎಂಥದ್ದು ಗೊತ್ತೇ?..
ಮರಣದಂಡನೆ ವಿಧಿಸುವುದಕ್ಕೆ ಇದೆ ಬಲವಾದ ಕಾರಣ..
ಮಾಂಟ್ಗೊಮೆರಿ ಎಂಬ ಮಹಿಳೆ 16 ವರ್ಷಗಳ ಹಿಂದೆ ನಾಯಿಮರಿಯೊಂದನ್ನು ದತ್ತು ತೆಗೆದುಕೊಳ್ಳಲು ಅಮೆರಿಕದ ಕಾನ್ಸಾನ್ ಎಂಬ ಪ್ರದೇಶದ ಮಿಸ್ಸೌರಿ ಬಳಿಯ ಸ್ಕಿಡ್‌ಮೋರ್‌ಗೆ ತೆರಳಿದ್ದಳು. ಅಲ್ಲಿ ಆಕೆಗೆ ಗರ್ಭಿಣಿ ಯುವತಿ ಬಾಬ್ಬಿ ಜೋ ಸ್ಟಿನ್ನೆಟ್ ಸಿಗ್ತಾಳೆ. ಈ ಸ್ಟಿನ್ನೆಟ್ ಬೇರಾರೂ ಅಲ್ಲ. ಆಕೆ ವಿವಿಧ ತಳಿಗಳ ನಾಯಿಗಳನ್ನು ಸಾಕುತ್ತಿರುವವಳು. ಆಕೆಯ ಜೊತೆ ನಾಯಿ ಬ್ರೀಡ್‌ಗಳ ಬಗ್ಗೆ ಮಾತುಕತೆ ನಡೆಸಿದ ಮಾಂಟ್ಗೊಮೆರಿ, ಸ್ಟಿನ್ನೆಟ್‌ಳನ್ನು ತನ್ನ ಕಾರಿನಲ್ಲಿ ಕೂರಿಸಿಕೊಂಡು ಸುಮಾರು 273 ಕಿಲೋ ಮೀಟರ್ ಕರೆದೊಯ್ತಾಳೆ.
ಈ ವೇಳೆ ಆಕೆಗೆ ಅದೇನಾಯ್ತೋ ಗೊತ್ತಿಲ್ಲ. ಒಂದೆಡೆ ಕಾರು ನಿಲ್ಲಿಸಿ ಕೈಗೆ ಹಗ್ಗ ತೆಗೆದುಕೊಳ್ಳುತ್ತಾಳೆ. ಅದೇ ಹಗ್ಗದಿಂದ ಸ್ಟಿನ್ನೆಟ್ ಕುತ್ತಿಗೆಗೆ ಬಿಗಿದೇ ಬಿಟ್ಟಳು. ಅಷ್ಟಕ್ಕೆ ಈಕೆಯ ವಿಕೃತಿ ನಿಲ್ಲಲಿಲ್ಲ. ಕೈಗೆ ಚಾಕು ತೆಗೆದುಕೊಂಡಳು. ಅದೇ ಚಾಕುವಿನಿಂದ ಬಸುರಿ ಯುವತಿಯ ಹೊಟ್ಟೆ ಬಗೆದು ಮಗುವನ್ನು ಹೊರತೆಗೆದೇ ಬಿಟ್ಟಳು. ಇದು ಯಾರೂ ಊಹಿಸಲಾರದ ಭೀಬತ್ಸ ಸನ್ನಿವೇಶ. ಮಹಿಳೆಯ ಪೈಶಾಚಿಕ ಕೃತ್ಯಕ್ಕೆ ಆ ಯುವತಿ ಅಲ್ಲೇ ಪ್ರಾಣ ಬಿಡುತ್ತಾಳೆ. ಹೊಟ್ಟೆಯಿಂದ ಹೊರತೆಗೆದ ಆ ಮಗುವನ್ನು 'ರಾಕ್ಷಸಿ' ಮಾಂಟ್ಗೊಮೆರಿ ತನ್ನೊಂದಿಗೆ ಹೊತ್ತೊಯ್ತಾಳೆ.
'ನಾನು ಗರ್ಭಿಣಿ'ಯಾಗಿದ್ದೆ ಎಂದು ಇಲ್ಲ ಸಲ್ಲದ ಸುಳ್ಳು ಕತೆಗಳನ್ನು ಕಟ್ಟಿ ಮಾಂಟ್ಗೊಮೆರಿ ಸುತ್ತಾಡಿದ್ದಾಳೆ. ಕೆಲ ದಿನಗಳ ನಂತರ ಕೈಯಲ್ಲಿ ಮಗುವನ್ನು ಹಿಡಿದು ತಿರುಗಾಡಿದ್ದಾಳೆ. ಇದಿಷ್ಟು ಯಾವುದೋ ಸಿನಿಮಾದ ಇಂಟರ್‌ವಲ್ ವರೆಗಿನ ಸ್ಟೋರಿ ಇರಬೇಕು ಅಂತ ನಿಮಗನ್ನಿಸಬಹುದೇನೋ.. ಆದ್ರೆ ಈ ಸ್ಟೋರಿ ಇಷ್ಟಕ್ಕೆ ಮುಗಿದಿಲ್ಲ.! ಮುಂದಿದೆ ಕಹಾನಿ..
ನಿನ್ನೆಮೊನ್ನೆ ನಾನು ಬಸುರಿ ಎಂದು ಹೇಳುತ್ತಿದ್ದವಳ ಕೈಯಲ್ಲಿ ಅಷ್ಟು ಬೇಗ ಮಗುವಿರಲು ಹೇಗೆ ಸಾಧ್ಯ? ಅನ್ನೋದು ಜನರಿಗೆ ಗೊತ್ತಾಗಿಬಿಟ್ಟಿದೆ. ಅಷ್ಟೇ ಏಕೆ.. ಈ ಮಹಿಳೆಯ ಡ್ರಾಮಾ ಇದೇ ಮೊದಲೂ ಆಗಿರಲಿಲ್ಲ. ಹಾಗಂತ ಜನರೇನೂ ಸುಮ್ಮನಿರಲಿಲ್ಲ. ತಮ್ಮಷ್ಟಕ್ಕೆ ಗುಸುಗುಸು ಮಾತನಾಡಿಕೊಂಡು ಸುಮ್ಮನಿರುತ್ತಿದ್ದರು. ಆದ್ರೆ ಪಾಪದ ಕೊಡ ತುಂಬಿತೋ ಏನೋ.. ಮಾಂಟ್ಗೊಮೆರಿ ಜೊತೆಗಿದ್ದ ಮಗುವನ್ನು ನೋಡಿದ ಸ್ಥಳೀಯರು ಕೂಡಲೇ ಪೊಲೀಸರಿಗೆ ಕರೆ ಮಾಡಿ ಕೊನೆಗೂ ವಿಷಯ ಮುಟ್ಟಿಸಿದ್ದಾರೆ. ಜೊತೆಗೆ ಆಕೆಯನ್ನು ಪೊಲೀಸರಿಗೆ ಒಪ್ಪಿಸುವ ಕೆಲಸವನ್ನೂ ಅವರೇ ಮಾಡ್ತಾರೆ.
ಆ ವೇಳೆಗಾಗಲೇ ಸ್ಪಿನ್ನೆಟ್ ಅವರ ಹತ್ಯೆ ಅಮೆರಿಕದಲ್ಲಿ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಈ ಘಟನೆಯ ಸುತ್ತ ಸಾಕಷ್ಟು ಆಯಾಮಗಳಿಂದ ತನಿಖೆ ನಡೆಸಿದ ಪೊಲೀಸ್ ಅಧಿಕಾರಿಗಳು, ಮಾಂಟ್ಗೊಮೆರಿ ಮನೆಗೆ ಭೇಟಿ ನೀಡ್ತಾರೆ. ಅಲ್ಲಿ ಸಾಕಷ್ಟು ಶೋಧ ಕಾರ್ಯವನ್ನೂ ನಡೆಸ್ತಾರೆ. ಅವರಿಗಲ್ಲಿ ಕೊಲೆಗೀಡಾದ ಯುವತಿ ಸ್ಟಿನ್ನೆಟ್ ಜೊತೆ ನಡೆಸಿದ್ದ ಸಂಭಾಷಣೆಯ ಕೆಲವು ಮಹತ್ವದ ಮಾಹಿತಿಗಳನ್ನು ದೊರಕುತ್ತವೆ. ಇವುಗಳನ್ನು ಜತನದಿಂದ ಸಂಗ್ರಹಿಸಿ ನ್ಯಾಯಾಲಯಕ್ಕೆ ಹಾಜರುಪಡಿಸ್ತಾರೆ.
ಮಹಿಳೆಯ ಪೈಶಾಚಿಕ ಕೃತ್ಯದ ಹಿಂದಿದೆ ಆ ದಿನಗಳ ಕಹಿ ನೆನಪು!
ಈ ದುಷ್ಕೃತ್ಯದ ಹಿಂದಿತ್ತು ಮಾಂಟ್ಗೊಮೆರಿಯ ಬಾಲ್ಯದ ಕಹಿನೆನಪು. ಚಿಕ್ಕವಯಸ್ಸಿನಲ್ಲಿದ್ದಾಗ ಆಕೆಯ ಮೇಲೆ ಅವಳ ಮಲತಂದೆಯೇ ಲೈಂಗಿಕ ದೌರ್ಜನ್ಯವೆಸಗಿದ್ದನಂತೆ. ಇದರಿಂದ ಆಕೆ ಮಾನಸಿಕವಾಗಿ, ದೈಹಿಕವಾಗಿಯೂ ಸಾಕಷ್ಟು ಜರ್ಜರಿತಗೊಂಡಿದ್ದಳು. ಇದು ಆಕೆಯ ಬದುಕನ್ನು ಅಸಹನೀಯಗೊಳಿಸಿದ್ದಲ್ಲದೆ ಮಾನವೀಯ ಗುಣಗಳನ್ನೇ ಮರೆ ಮಾಚಿದೆ. ಈ ವಿಚಾರ ತನಿಖೆಯ ವೇಳೆ ಗೊತ್ತಾಗಿದೆ.
ಪೊಲೀಸರು ಇಷ್ಟಕ್ಕೆ ಬಿಡಲಿಲ್ಲ. ಸ್ಪಿನ್ನೆಟ್ ಹತ್ಯೆಗೆ ಸಂಬಂಧಿಸಿದಂತೆ ಸಾಕಷ್ಟು ಜನರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಮೂಟೆಗಟ್ಟಲೆ ದಾಖಲೆಗಳು, ಸಾಕ್ಷ್ಯಗಳನ್ನು ಕಲೆ ಹಾಕಿದ್ದಾರೆ. ಹೀಗೆ ಈ ತನಿಖಾ ಪ್ರಕ್ರಿಯೆ ಸತತ 16 ವರ್ಷಗಳ ಕಾಲ ನಡೆಯಿತು.
ಇದೀಗ ಪ್ರಕರಣದ ತನಿಖೆ ತಾರ್ಕಿಕ ಹಂತ ತಲುಪಿದೆ. ಆರೋಪಿ ಮಾಂಟ್ಗೊಮೆರಿಗೆ ಕೋರ್ಟ್ ಮರಣದಂಡನೆ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.
ಸ್ಪಿನ್ನೆಟ್ ಹತ್ಯೆ ಮಾಡಿ ಕರೆ ತಂದಿದ್ದ ಮಗು ವಿಕ್ಟೋರಿಯಾ ಜೋ ಈಗ ಬೆಳೆದು ದೊಡ್ಡವಳಾಗಿದ್ದಾಳೆ. ಆದ್ರೆ ಆಕೆ ತನ್ನ ಬದುಕಿನ ಘಟನೆಯ ಬಗ್ಗೆ ಏನನ್ನೂ ಹೇಳಲಾರಳು!.