ವಾಷಿಂಗ್ಟನ್: ಅಫ್ಘಾನ್ ಭದ್ರತಾ ಪಡೆಗಳನ್ನು ಬೆಂಬಲಿಸಲು ಕಳೆದ ಕೆಲವು ದಿನಗಳಲ್ಲಿ ಯುಎಸ್ ಮಿಲಿಟರಿ ಅಫ್ಘಾನಿಸ್ತಾನದಲ್ಲಿ ವೈಮಾನಿಕ ದಾಳಿ ನಡೆಸಿದೆ ಎಂದು ಪೆಂಟಗನ್ ಗುರುವಾರ ದೃಢಪಡಿಸಿದೆ. ಆಫ್ - ಕ್ಯಾಮೆರಾ ಪತ್ರಿಕಾಗೋಷ್ಠಿಯಲ್ಲಿ ಪೆಂಟಗನ್ ವಕ್ತಾರ ಜಾನ್ ಕಿರ್ಬಿ, "ಕಳೆದ ಹಲವಾರು ದಿನಗಳಿಂದ ನಾವು ವೈಮಾನಿಕ ದಾಳಿಯ ಮೂಲಕ ಎಎನ್‌ಡಿಎಸ್ಎಫ್ (ಅಫ್ಘಾನ್ ರಾಷ್ಟ್ರೀಯ ರಕ್ಷಣಾ ಮತ್ತು ಭದ್ರತಾ ಪಡೆ) ಗಳನ್ನು ಬೆಂಬಲಿಸಲು ಕಾರ್ಯನಿರ್ವಹಿಸಿದ್ದೇವೆ" ಎಂದು ಹೇಳಿದರು.
ಕಳೆದ ಮೂರು ದಿನಗಳಲ್ಲಿ ಅಫ್ಘಾನಿಸ್ತಾನದ ಹಲವಾರು ಪ್ರಾಂತ್ಯಗಳಲ್ಲಿ ನಡೆಸಿದ ವೈಮಾನಿಕ ದಾಳಿಯಲ್ಲಿ ಕನಿಷ್ಠ ಐದು ತಾಲಿಬಾನ್ ಭಯೋತ್ಪಾದಕರು ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ತಿಳಿಸಿವೆ.
ಅಫ್ಘಾನ್ ಪತ್ರಕರ್ತ ಬಿಲಾಲ್ ಸರ್ವಾರಿ ತಮ್ಮ ಟ್ವೀಟ್ನಲ್ಲಿ "ತಾಲಿಬಾನ್ ಅನ್ನು ಗುರಿಯಾಗಿಸಿಕೊಂಡು ವೈಮಾನಿಕ ದಾಳಿ ನಡೆಸಿದ್ದು ಅಮೆರಿಕದ ಸೈನ್ಯ" ಎಂದು ಹೇಳಿಕೊಂಡಿದ್ದರು. ಇದೀಗ ಈ ಮಾಹಿತಿ ನಿಜವಾಗಿದೆ.
ಸುಮಾರು 212 ಜಿಲ್ಲಾ ಕೇಂದ್ರಗಳ ಮೇಲೆ ನಿಯಂತ್ರಣ ಹೊಂದಿರುವ ತಾಲಿಬಾನ್, ಅಫ್ಘಾನಿಸ್ತಾನದಲ್ಲಿ ತಮ್ಮ ಅನಿವಾರ್ಯ ವಿಜಯವನ್ನು ಪ್ರಚಾರ ಮಾಡುತ್ತಿದೆ ಎಂದು ಯುಎಸ್ ಜಂಟಿ ಮುಖ್ಯಸ್ಥರ ಅಧ್ಯಕ್ಷ ಜನರಲ್ ಮಾರ್ಕ್ ಮಿಲ್ಲೆ ಬುಧವಾರ ಹೇಳಿದ್ದರು.