ವಾಷಿಂಗ್ಟನ್ (ಅಮೆರಿಕ): ಕಳೆದೊಂದು ವಾರದಿಂದ ನಿರಂತರವಾಗಿ ಬಾಂಗ್ಲಾದೇಶದಲ್ಲಿ ಹಿಂದೂಗಳನ್ನು ಗುರಿಯಾಗಿಸಿಕೊಂಡು ದಾಳಿಗಳು ನಡೆಯುತ್ತಿದೆ. ಇದರ ಪರಿಣಾಮ ಈಗಾಗಲೇ ಹಿಂದೂ ಸಮುದಾಯದ ಅನೇಕರು ಹತ್ಯೆಯಾಗಿದ್ದು, ದುಷ್ಕರ್ಮಿಗಳ ಅಟ್ಟಹಾಸಕ್ಕೆ ದೇಗುಲಗಳು ಧ್ವಂಸಗೊಂಡಿವೆ.
ಈ ಘಟನೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಕಳವಳ, ಖಂಡನೆ ವ್ಯಕ್ತವಾಗಿದ್ದು, ಹಿಂದೂಗಳ ಮೇಲಿನ ದಾಳಿಯನ್ನು ಅಮೆರಿಕ ಖಂಡಿಸಿದೆ. ಈ ಕುರಿತು ವಿಷಾದ ವ್ಯಕ್ತಪಡಿಸಿರುವ ಯುಎಸ್ ಸರ್ಕಾರದ ವಕ್ತಾರರೊಬ್ಬರು, 'ಧರ್ಮ ಅಥವಾ ನಂಬಿಕೆಯ ಸ್ವಾತಂತ್ರ್ಯ ಮಾನವನ ಹಕ್ಕು. ವಿಶ್ವದಾದ್ಯಂತ ಪ್ರತಿಯೊಬ್ಬ ವ್ಯಕ್ತಿಯೂ ಆತನ ಧಾರ್ಮಿಕ ನಂಬಿಕೆಯ ಹೊರತಾಗಿಯೂ ಸುರಕ್ಷಿತ ಭಾವದ ಮೂಲಕ ಆತನ ಹಬ್ಬಗಳ ಆಚರಣೆಗೆ ಬೆಂಬಲಿಸಬೇಕು. ಹಿಂದೂ ಸಮುದಾಯದ ಮೇಲೆ ಬಾಂಗ್ಲಾದೇಶದಲ್ಲಿ ನಡೆದ ದಾಳಿಯನ್ನು ನಾವು ಖಂಡಿಸುತ್ತೇವೆ' ಎಂದರು.
ದುರ್ಗಾ ಪೂಜಾ ಕಾರ್ಯಕ್ರಮದ ವೇಳೆ ಹಿಂದೂಗಳ ಮನೆಗಳ ಮೇಲೆ ಹಾಗೂ ದೇವಾಲಯದ ಮೇಲೆ ದುಷ್ಕರ್ಮಿಗಳು ಮನಸೋಇಚ್ಛೆ ದಾಳಿ ನಡೆಸಿದ್ದಾರೆ. ಈ ದಾಳಿಯನ್ನು ಖಂಡಿಸಿ ಅಮೆರಿಕದಲ್ಲಿರುವ ಬಾಂಗ್ಲಾದೇಶಿ ಹಿಂದೂ ವಲಸಿಗರು ಬಾಂಗ್ಲಾ ರಾಯಭಾರ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದ್ದಾರೆ.
ಪ್ರತ್ಯೇಕ ಪಾಕಿಸ್ತಾನಕ್ಕಾಗಿ ಆಗ್ರಹಿಸಿ ಇಸ್ಲಾಮಿಸ್ಟ್‌ಗಳು 1946ರ ಅಕ್ಟೋಬರ್‌ನಲ್ಲಿ 12,000 ಹಿಂದುಗಳನ್ನು ಕೊಂದು 50,000 ಜನರನ್ನು ಬಲವಂತವಾಗಿ ಮತಾಂತರಗೊಳಿಸಿದ 75 ವರ್ಷಗಳ ನಂತರ ಈ ರೀತಿಯ ದಾಳಿ ನಡೆಯುತ್ತಿರುವುದು ಭಯ ಹುಟ್ಟಿಸುತ್ತಿದೆ ಎಂದು ಅಮೆರಿಕ ಮೂಲದ ಹಿಂದೂಪ್ಯಾಕ್ಟ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೆಶಕ ಉತ್ಸವ್ ಚಕ್ರವರ್ತಿ ಹೇಳಿದ್ದಾರೆ.
ಹಿಂದೂಗಳು ಅಲ್ಪಸಂಖ್ಯಾತ ಸಮುದಾಯವಾಗಿರುವ ಬಾಂಗ್ಲಾದಲ್ಲಿ ದಾಳಿಗಳು ಹೆಚ್ಚಾಗುತ್ತಲೇ ಇವೆ. 1940ರಲ್ಲಿ ಶೇ.28ರಷ್ಟಿದ್ದ ಹಿಂದೂಗಳ ಜನಸಂಖ್ಯೆ ಪ್ರಸ್ತುತ ಶೇ.9ಕ್ಕೆ ಕುಸಿದಿದೆ ಎಂದು ಆತಂಕ ಹೊರಹಾಕಿದ್ದಾರೆ.
ಕಳೆದ ವಾರ ದುರ್ಗಾಪೂಜೆ ಸಂದರ್ಭದಲ್ಲಿ ಹಿಂದೂಗಳು ಹಾಕಿದ್ದ ಪೆಂಡಾಲ್ಗಳನ್ನು ಸಂಪೂರ್ಣವಾಗಿ ಧ್ವಂಸ ಮಾಡಲಾಗಿತ್ತು. ಜೊತೆಗೆ ದೇವಸ್ಥಾನದ ಮೇಲೂ ಮನಬಂದಂತೆ ದಾಳಿ ನಡೆಸಲಾಗಿತ್ತು. ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದ ಹಿಂದೂಗಳು ದೊಡ್ಡ ಮಟ್ಟದ ಪ್ರತಿಭಟನೆ ನಡೆಸಿದ್ದರು. ಇದ್ರ ಹೊರತಾಗಿಯೂ ರಂಗಪುರ ಜಿಲ್ಲೆಯ ಗ್ರಾಮವೊಂದರಲ್ಲೇ ನೂರಾರು ದುಷ್ಕರ್ಮಿಗಳ ಗುಂಪು ದುಷ್ಕೃತ್ಯ ಮುಂದುವರೆಸಿದೆ. ನಿನ್ನೆ ಸುಮಾರು 66 ಮನೆಗಳನ್ನು ಧ್ವಂಸ ಮಾಡಿದ್ದು, 20ಕ್ಕೂ ಅಧಿಕ ಹಿಂದೂ ಮನೆಗಳಿಗೆ ಬೆಂಕಿ ಹಚ್ಚಿರುವುದು ವರದಿಯಾಗಿದೆ.
ಇದನ್ನೂ ಓದಿ: ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ಮುಂದುವರಿದ ದಾಳಿ.. 66 ಮನೆ ಧ್ವಂಸ, 20 ಮನೆಗಳಿಗೆ ಬೆಂಕಿ