ವಾಷಿಂಗ್ಟನ್, ಅಮೆರಿಕ: ಕಾಬೂಲ್ ಸ್ಫೋಟಕ್ಕೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಹೇಳಿದ್ದ ಅಮೆರಿಕ, ಕೇವಲ 48 ಗಂಟೆಗಳಲ್ಲಿ ಅಫ್ಘಾನಿಸ್ತಾನದ ನಂಗರ್‌ಹಾರ್ ಪ್ರಾಂತ್ಯದಲ್ಲಿ ಡ್ರೋಣ್ ದಾಳಿ ನಡೆಸಿದೆ. ದಾಳಿಯಲ್ಲಿ ಕಾಬೂಲ್ ವಿಮಾನ ನಿಲ್ದಾಣ ಸಮೀಪದಲ್ಲಿ ನಡೆದಿದ್ದ ಆತ್ಮಾಹುತಿ ಬಾಂಬ್ ದಾಳಿಯ ಸಂಚುಕೋರನನ್ನು ಕೊಲ್ಲಲಾಗಿದೆ ಎಂದು ಉನ್ನತ ಮೂಲಗಳು ಮಾಹಿತಿ ನೀಡಿವೆ.
ಕಾಬೂಲ್ನ ಹಮೀದ್ ಕರ್ಜೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ದಾಳಿಯ ಯೋಜನೆ ರೂಪಿಸಿದ ಐಸಿಸ್ ಉಗ್ರನ ಮೇಲೆ ದಾಳಿ ನಡೆಸಲಾಗಿದೆ ಎಂದು ಅಮೆರಿಕ ರಕ್ಷಣಾ ಇಲಾಖೆ ಹೇಳಿದೆ ಎಂದು ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆ ಉಲ್ಲೇಖಿಸಿದೆ.
ಈ ಕುರಿತು ಅಧಿಕೃತ ಹೇಳಿಕೆಯೊಂದನ್ನು ಬಿಡುಗಡೆ ಮಾಡಿರುವ ಅಮೆರಿಕದ ಸೆಂಟ್ರಲ್ ಕಮಾಂಡ್, ನಂಗರ್‌ಹಾರ್ ಎಂಬಲ್ಲಿ ಅಮೆರಿಕ ಪಡೆಗಳು ವಾಯುದಾಳಿ ನಡೆಸಿದ್ದು, ಕಾಬೂಲ್ ಬ್ಲಾಸ್ಟ್ಗೆ ಸಂಚು ರೂಪಿಸಿದ್ದ ಐಸಿಸ್-ಕೆ ಉಗ್ರನ ಕೊಂದಿದೆ. ವಾಯುದಾಳಿಯಲ್ಲಿ ಯಾವುದೇ ನಾಗರಿಕರಿಗೂ ಗಾಯಗಳಾಗಿಲ್ಲ ಎಂದು ಸ್ಪಷ್ಟನೆ ನೀಡಿದೆ.
ಮತ್ತೊಂದೆಡೆ ಕಾಬೂಲ್ ಏರ್ಪೋರ್ಟ್ನ ಗೇಟ್ಗಳಿಂದ ತಕ್ಷಣವೇ ದೂರ ಸರಿಯುವಂತೆ ಅಲ್ಲಿನ ನಾಗರಿಕರಿಗೆ ಅಮೆರಿಕ ಸೂಚನೆ ನೀಡಿದೆ ಎಂದು ಎಎಫ್ಬಿ ಸುದ್ದಿ ಸಂಸ್ಥೆ ಉಲ್ಲೇಖಿಸಿದೆ. ಮತ್ತೊಂದು ಸ್ಫೋಟ ನಡೆಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಕಾಬೂಲ್ ದಾಳಿ ನಡೆದ ನಂತರ ಬಾಂಬ್ ದಾಳಿ ನಡೆಸಿ ಅಮೆರಿಕನ್ನರ ಸಾವಿಗೆ ಕಾರಣವಾದ ಸಂಘಟನೆಯ ವಿರುದ್ಧ ದಾಳಿ ಮಾಡುತ್ತೇವೆ. ನಾವು ಇದನ್ನು ಕ್ಷಮಿಸಲ್ಲ. ಜೊತೆಗೆ ಇದನ್ನು ಮರೆಯುವುದೂ ಇಲ್ಲ. ನಿಮ್ಮನ್ನು ಬೇಟೆಯಾಡಿ ತಕ್ಕ ಪ್ರತ್ಯುತ್ತರ ನೀಡುತ್ತೇವೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಶಪಥ ಮಾಡಿದ್ದರು.
ಇದನ್ನೂ ಓದಿ: ಹೆಚ್ಚಿನ ಮಾಹಿತಿಯಿಲ್ಲದೇ ಕೊರೊನಾ ಮೂಲ ಪತ್ತೆ ಅಸಾಧ್ಯ: ಅಮೆರಿಕ ಇಂಟೆಲಿಜೆನ್ಸ್ ಕಮ್ಯೂನಿಟಿ