ನ್ಯೂಯಾರ್ಕ್: ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ ಜಗತ್ತಿನ ಸುಮಾರು 1.2 ಶತಕೋಟಿ ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ. ಉಪಕರಣ ಮತ್ತು ತಂತ್ರಜ್ಞಾನದ ಆಧಾರಿತ ಕಲಿಕಾ ವ್ಯವಸ್ಥೆಯ ಅಸಮಾನತೆಯು ಜಾಗತಿಕ ಶಿಕ್ಷಣದ ಬಿಕ್ಕಟ್ಟನ್ನು ಇನ್ನಷ್ಟು ಹೆಚ್ಚಿಸಬಹುದು ಎಂದು ವಿಶ್ವಸಂಸ್ಥೆಯ ಮಕ್ಕಳ ನಿಧಿ (ಯುನಿಸೆಫ್) ಆತಂಕ ವ್ಯಕ್ತಪಡಿಸಿದೆ.
ಬಹುತೇಕ ಶಾಲೆಗಳ ಬಾಗಿಲು ಮುಚ್ಚಿದ್ದು, ಕಲಿಕೆಯನ್ನು ಮುಂದುವರಿಸಲು ಬೇಕಾದ ತಂತ್ರಜ್ಞಾನ ಮತ್ತು ಸಾಮಗ್ರಿಗಳ ಬಳಕೆಯು ತಾರತಮ್ಯಗಳಿಂದ ಕೂಡಿದೆ ಎಂದು ಯುನಿಸೆಫ್ ಶಿಕ್ಷಣ ಮುಖ್ಯಸ್ಥ ರಾಬರ್ಟ್ ಜೆಂಕಿನ್ಸ್ ಹೇಳಿದರು.
ಮನೆಯಲ್ಲಿ ಸೀಮಿತ ಕಲಿಕೆಯ ನೆರವು ಪಡೆಯುತ್ತಿರುವ ಮಕ್ಕಳಿಗೆ ತಂತ್ರಜ್ಞಾನ ಆಧಾರಿತ ಶಿಕ್ಷಣಕ್ಕೆ ಬೇಕಾದ ಅಗತ್ಯ ಬೆಂಬಲವಿಲ್ಲ. ಪ್ರತಿ ಶಾಲೆ ಮತ್ತು ಪ್ರತಿ ಮಗುವಿಗೆ ಹಲವು ಕಲಿಕಾ ಪರಿಕರಗಳನ್ನು ಒದಗಿಸುವುದು ಮತ್ತು ಇಂಟರ್ನೆಟ್ ಕಲ್ಪಿಸುವುದನ್ನು ವೇಗಗೊಳಿಸಬೇಕಿದೆ.
ಯುನಿಸೆಫ್ ಮಾಹಿತಿಯ ಪ್ರಕಾರ, ವಿಶ್ವಾದ್ಯಂತ 71 ದೇಶಗಳಲ್ಲಿ ಜನಸಂಖ್ಯೆಯ ಅರ್ಧಕ್ಕಿಂತ ಕಡಿಮೆ ಜನರು ಇಂಟರ್ನೆಟ್ಗೆ ಪ್ರವೇಶ ಪಡೆದಿದ್ದಾರೆ. ವಿಪರ್ಯಾಸವೆಂದರೆ, 127 ದೇಶಗಳಲ್ಲಿ ಸುಮಾರು ಮುಕ್ಕಾಲು ಭಾಗದಷ್ಟು ಸರ್ಕಾರಗಳು ಶಿಕ್ಷಣವನ್ನು ತಲುಪಿಸಲು ಆನ್‌ಲೈನ್ ಪ್ಲಾಟ್‌ಫಾರ್ಮ್ ಬಳಸುತ್ತಿವೆ. ಆದರೆ ಶಾಲೆಗಳು ಮುಚ್ಚಿವೆ.
88 ದೇಶಗಳ ಪೈಕಿ 40 ದೇಶಗಳಲ್ಲಿನ ನಗರ ಪ್ರದೇಶಗಳಲ್ಲಿ ವಾಸಿಸುವ ಮಕ್ಕಳು ತಮ್ಮ ಗ್ರಾಮೀಣ ಸಹವರ್ತಿಗಳಿಗಿಂತ ಎರಡು ಪಟ್ಟು ಹೆಚ್ಚು ಟಿವಿ ಹೊಂದುವ ಸಾಧ್ಯತೆಯಿದೆ ಎಂದು ಡೇಟಾ ಬಹಿರಂಗಪಡಿಸಿದೆ.
ವಿದ್ಯುತ್ ಸೌಕರ್ಯ ಸಹ ಒಂದು ದೊಡ್ಡ ಅಡಚಣೆಯಾಗಿದೆ. ದತ್ತಾಂಶ ಹೊಂದಿರುವ 28 ದೇಶಗಳಲ್ಲಿ ಬಡತನದ ಪ್ರದೇಶದಲ್ಲಿ ವಾಸಿಸುವ ಶೇ 65ರಷ್ಟು ಕುಟುಂಬಗಳು ಮಾತ್ರ ವಿದ್ಯುತ್ ಸಂಪರ್ಕ ಹೊಂದಿವೆ ಎಂದು ಯುನಿಸೆಫ್ ಹೇಳುತ್ತಿದೆ.