ವಿಶ್ವಸಂಸ್ಥೆ:(ಅಮೆರಿಕ) ಪಶ್ಚಿಮ ಬಂಗಾಳ ತೀರ ಪ್ರದೇಶದಲ್ಲಿ ಅಪ್ಪಳಿಸಿರುವ 'ಫಣಿ' ಚಂಡಮಾರುತದ ಬಗ್ಗೆ ನಿಖರ ಮಾಹಿತಿ ನೀಡಿದ ಭಾರತೀಯ ಹವಮಾನ ಇಲಾಖೆ (ಐಎಂಡಿ) ಕಾರ್ಯದಕ್ಷತೆಗೆ ವಿಶ್ವಸಂಸ್ಥೆ ಮೆಚ್ಚುಗೆ ಸೂಚಿಸಿದೆ.
ಒಡಿಶಾದ ಪುರಿ ಕಡಲ ತೀರಕ್ಕೆ ಅಪ್ಪಳಿಸಿದ ಚಂಡಮಾರುತದ ಪರಿಣಾಮ ಭೀಕರವಾಗಿತ್ತು. ಆದ್ರೆ, ಈ ಬಾರಿ ಹೆಚ್ಚಿನ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡ ಹಿನ್ನೆಲೆಯಲ್ಲಿ ಜೀವಹಾನಿ ಕನಿಷ್ಠ ಪ್ರಮಾಣದಲ್ಲಿ ಸಂಭವಿಸಿದೆ. ಸೈಕ್ಲೋನ್ ಆಗಮಿಸುವ ಮುನ್ನವೇ 12 ಲಕ್ಷ ನಿವಾಸಿಗಳನ್ನು ಸುರಕ್ಷತಾ ಸ್ಥಳಗಳಿಗೆ ಸ್ಥಳಾಂತರಿಸಲಾಗಿತ್ತು. ಹಲವು ರೀತಿಯ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳುವಲ್ಲಿ ಐಎಂಡಿ ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ ನಡೆಸಿದ ಕಾರ್ಯವನ್ನು ವಿಶ್ವಸಂಸ್ಥೆಯ ವಿಶೇಷ ಪ್ರತಿನಿಧಿ ಮಾಮಿ ಮಿಜುಟೋರಿ ಪ್ರಶಂಸಿಸಿದ್ದಾರೆ.
ಕಳೆದ 20 ವರ್ಷಗಳಲ್ಲಿ ಸಂಭವಿಸಿದ ಅತ್ಯಂತ ಭಯಾನಕ ಚಂಡಮಾರುತಕ್ಕೆ 8 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇದರ ಭಯಾನಕತೆಗೆ ಹೋಲಿಸಿದರೆ ಪ್ರಾಣಹಾನಿಯ ಪ್ರಮಾಣ ತೀರಾ ಕಡಿಮೆ. ಹಾಗಾಗಿ, ತೆಗೆದುಕೊಂಡ ಸುರಕ್ಷತಾ ನಡೆಗೆ ವಿಶ್ವಸಂಸ್ಥೆ ಸೇರಿದಂತೆ ಹಲವು ರಾಷ್ಟ್ರಗಳು ಭಾರತದ ಬೆನ್ನು ತಟ್ಟಿವೆ.