ವಾಷಿಂಗ್ಟನ್: ಕೋವಿಡ್ ಎರಡನೇ ಅಲೆಯ ಸಂಕಷ್ಟದಲ್ಲಿರುವ ಭಾರತಕ್ಕೆ ಜಾಗತಿಕ ಮೈಕ್ರೋಬ್ಲಾಗಿಂಗ್ ದೈತ್ಯ ಟ್ವಿಟ್ಟರ್ 15 ಮಿಲಿಯನ್ ಯುಎಸ್ ಡಾಲರ್ ಹಣಕಾಸು ನೆರವು ನೀಡಿದೆ.
ನೆರವಿನ ಹಣವನ್ನು ಕೇರ್, ಏಡ್ ಇಂಡಿಯಾ ಮತ್ತು ಸೇವಾ ಇಂಟರ್ನ್ಯಾಷನಲ್ ಯುಎಸ್ಎ ಎಂಬ ಮೂರು ಸರ್ಕಾರೇತರ ಸಂಸ್ಥೆಗಳಿಗೆ ನೀಡಲಾಗಿದೆ ಎಂದು ಟ್ವಿಟ್ಟರ್ ಸಿಇಒ ಜಾಕ್ ಪ್ಯಾಟ್ರಿಕ್ ಡಾರ್ಸೆ ತಿಳಿಸಿದ್ದಾರೆ. ಕೇರ್ಗೆ 10 ಮಿಲಿಯನ್, ಏಡ್ ಇಂಡಿಯಾ ಮತ್ತು ಸೇವಾ ಇಂಟರ್ನ್ಯಾಷನಲ್ ಯುಎಸ್ ತಲಾ 2.5 ಮಿಲಿಯನ್ ಡಾಲರ್ ಹಣ ನೀಡಲಾಗಿದೆ.
'ಹೆಲ್ಪ್ ಇಂಡಿಯಾ ಟು ಡಿಫೀಟ್ ಕೋವಿಡ್-19' ಅಭಿಯಾನದ ಅಂಗವಾಗಿ ಸೇವಾ ಇಂಟರ್ನ್ಯಾಷನಲ್ ಮೂಲಕ ನೀಡಲಾದ ಈ ನೆರವು ಜೀವ ಉಳಿಸುವ ಸಾಧನಗಳಾದ ಆಮ್ಲಜನಕ ಸಾಂದ್ರಕಗಳು, ವೆಂಟಿಲೇಟರ್‌ಗಳು, ಬೈಪಾಪ್ (ಬಿಲೆವೆಲ್ ಪಾಸಿಟಿವ್ ಏರ್‌ವೇ ಪ್ರೆಶರ್) ಮತ್ತು ಸಿಪಿಎಪಿ (ಕಂಟ್ಯೂನೆಸ್ ಪಾಸಿಟಿವ್ ಏರ್‌ವೇ ಪ್ರಶರ್) ಯಂತ್ರಗಳನ್ನು ಒದಗಿಸಲು ಸಹಾಯವಾಗುತ್ತದೆ ಎಂದು ಸ್ಯಾನ್ ಫ್ರಾನ್ಸಿಸ್ಕೋ ಮೂಲದ ಟ್ವಿಟ್ಟರ್ ಪ್ರಕಟನೆಯಲ್ಲಿ ತಿಳಿಸಿದೆ. ವೈದ್ಯಕೀಯ ಸಲಕರಣೆಗಳನ್ನು ಸರ್ಕಾರಿ ಆಸ್ಪತ್ರೆಗಳು ಮತ್ತು ಕೋವಿಡ್ ಕೇರ್ ಸೆಂಟರ್ಗಳಿಗೆ ವಿತರಿಸಲಾಗುತ್ತದೆ ಎಂದು ಹೇಳಿದೆ.
ಇದನ್ನೂ ಓದಿ: ಭಾರತದಲ್ಲಿ ಹೊಸ ಬಗೆ ಕೋವಿಡ್ ಅಟ್ಟಹಾಸ: ಅಮೆರಿಕದಲ್ಲಿ 12-15 ವಯಸ್ಸಿನ ಮಕ್ಕಳಿಗೂ ಲಸಿಕೆ
ಟ್ವಿಟ್ಟರ್ ಪ್ರಕಟಣೆಗೆ ಪ್ರತಿಕ್ರಿಯಿಸಿದ ಸೇವಾ ಇಂಟರ್‌ನ್ಯಾಷನಲ್‌ನ ಮಾರ್ಕೆಟಿಂಗ್ ಮತ್ತು ಫಂಡ್ ಡೆವಲಪ್‌ಮೆಂಟ್ ಉಪಾಧ್ಯಕ್ಷ ಸಂದೀಪ್ ಖಡ್ಕೆಕರ್, ದೇಣಿಗೆ ನೀಡಿದ್ದಕ್ಕೆ ಧನ್ಯವಾದ ಅರ್ಪಿಸಿದ್ದು, ಸೇವಾ ಸಂಸ್ಥೆಯ ಕಾರ್ಯವನ್ನು ಗುರುತಿಸಿದೆ ಎಂಬುವುದಕ್ಕೆ ಇದು ಉದಾಹರಣೆ ಎಂದಿದ್ದಾರೆ.
ನಮ್ಮದು ಸ್ವಯಂ ಸೇವಕರಿಂದ ನಡೆಸುವ ಲಾಭೋದ್ದೇಶವಿಲ್ಲದ ಸಂಘಟನೆಯಾಗಿದೆ ಮತ್ತು ಪವಿತ್ರ ಹಿಂದೂ ಆಶಯವನ್ನು ಅನುಸರಿಸಿ, 'ಸರ್ವೇ ಭವಂತು ಸುಖಿನಃ' (ಎಲ್ಲರೂ ಸಂತೋಷವಾಗಿರಲಿ) ಎಂದು ಎಲ್ಲರಿಗೂ ಸೇವೆ ಸಲ್ಲಿಸುತ್ತೇವೆ ಅಂತ ಖಡ್ಕೆಕರ್ ತಿಳಿಸಿದ್ದಾರೆ.