ವಾಷಿಂಗ್ಟನ್: ಚೀನಾದಿಂದ ಆಮದು ಮಾಡಿಕೊಳ್ಳುವ ಉತ್ಪನ್ನಗಳ ಮೇಲೆ ಭಾರೀ ಸುಂಕ ವಿಧಿಸುವ ಮೂಲಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವಾಣಿಜ್ಯ ಸಮರಕ್ಕೆ ಇಳಿದದ್ದು, ಇಲ್ಲಿನ ಚರ್ಚ್ ಸಮುದಾಯದ ಮುಖ್ಯಸ್ಥರನ್ನು ಕೆರಳಿಸಿದೆ.
ಕಳೆದ ಮಾರ್ಚ್‌ನಲ್ಲಿ ಚೀನಾದಿಂದ ಆಮದು ಮಾಡಿಕೊಳ್ಳುವ ಉಕ್ಕು ಮತ್ತು ಅಲ್ಯೂಮಿನಿಯಂ ವಸ್ತುಗಳ ಮೇಲೆ ಭಾರೀ ಪ್ರಮಾಣದ ಸುಂಕ ವಿಧಿಸಲಾಯಿತು. ಇದಕ್ಕೆ ಪ್ರತಿಯಾಗಿ ಚೀನಾ ಕೂಡ ಅಮೆರಿಕದ ಸರಕುಗಳ ಕಸ್ಟಮ್ಸ್ ತೆರಿಗೆ ಹೆಚ್ಚಿಸಿತು. ಇದರ ನೇರ ಪರಿಣಾಮ ಧಾರ್ಮಿಕ ಗ್ರಂಥವಾದ 'ಹೋಲಿ ಬೈಬಲ್' ಮೇಲೂ ಬೀರಿದೆ. 'ಬೈಬಲ್ ಬೆಲೆ ಏರಿಕೆಗೆ ಟ್ರಂಪ್ರ ವಾಣಿಜ್ಯ ಸಮರವೇ ಕಾರಣ'ವೆಂದು ಚರ್ಚ್ ಮುಖ್ಯಸ್ಥರು ಆಪಾದಿಸಿದ್ದಾರೆ.
ಜಗತ್ತಿನಲ್ಲಿ ಮುದ್ರಿತವಾಗುವ ಶೇ. 50ಕ್ಕಿಂತ ಅಧಿಕ ಬೈಬಲ್ ಪುಸ್ತಕಗಳು ಚೀನಾ ಮೂಲದವು. ಚೀನಾದ ಮೇಲೆ ಹೇರಲಾದ 20.7 ಲಕ್ಷ ಕೋಟಿ ರೂ. (300 ಬಿಲಿಯನ್ ಡಾಲರ್) ಹೆಚ್ಚುವರಿ ಸುಂಕದಲ್ಲಿ ಮುದ್ರಿತ ಸಾಮಗ್ರಿ ಸರಕು ಸಹ ಒಳಗೊಂಡಿವೆ. ಧಾರ್ಮಿಕ ವ್ಯಾಪ್ತಿಗೆ ಬರುವ ಲಾಭದಾಯಕವಲ್ಲದ ಚರ್ಚ್, ಶಾಲೆ, ಸಚಿವಾಲಯ ಹಾಗೂ ಸ್ವಯಂ ಸೇವಾ ಸಂಸ್ಥೆಗಳ ಮೇಲೆ ನಕರಾತ್ಮಕ ಪರಿಣಾಮ ಬೀರಿದೆ ಎಂದು ಜೋಶ್ ಹಾರ್ಡರ್ ಹೇಳಿದ್ದಾರೆ.
ಪ್ರಪಂಚದಲ್ಲಿ ಮುದ್ರಿತವಾದ ಅರ್ಧಕ್ಕಿಂತ ಹೆಚ್ಚು ಬೈಬಲ್‌ಗಳು ಚೀನಾದಿಂದ ಬರುತ್ತವೆ. ಅತ್ಯುತ್ತಮವಾದ ಕಾಗದ ಮತ್ತು ತಂತ್ರಜ್ಞಾನಗಳ ಬಳಕೆಯಿಂದ ಇವು ಮುದ್ರಿತವಾಗುತ್ತವೆ. ಕಡಿಮೆ ಬೆಲೆಗೆ ದೊರೆಯುತ್ತಿದ್ದ ಬೈಬಲ್ಗೆ ಈಗ ಅಧಿಕ ಮೊತ್ತ ಪಾವತಿಸಬೇಕಿದೆ ಎಂದು ಹಳಹಳಿ ವ್ಯಕ್ತಪಡಿಸಿದರು.