ವಾಷಿಂಗ್ಟನ್: ಕೊರೊನಾ ವೈರಸ್ ವಿರುದ್ಧ ಇಡೀ ವಿಶ್ವವೇ ಹೋರಾಟಕ್ಕೆ ನಿಂತಿದೆ. ಈ ನಡುವೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೊರೊನಾ ವೈರಸ್ ಹರಡಲು ಚೀನಾವೇ ಪ್ರಮುಖ ಕಾರಣ ಅಂತ ಆರೋಪಿಸಿದ್ದರು. ಆದರೆ ಇದೀಗ ಚೀನಾದ ಮೇಲೆ ನನಗೆ ಅಪಾರ ಗೌರವವಿದೆ. ಚೀನಾ ಮತ್ತು ಅಮೆರಿಕಾ ನಡುವೆ ಉತ್ತಮ ಬಾಂಧವ್ಯವಿದೆ ಎಂದಿದ್ದಾರೆ.
ಅಲ್ಲದೆ ಕೊರೊನಾ ವೈರಸ್ ಕಮ್ಯೂನಿಸ್ಟ್ ದೇಶದಿಂದ ಆರಂಭಗೊಂಡು ನಿಯಂತ್ರಣ ಸಾಧ್ಯವಾಗದೇ ಇರುವುದು ದುರದೃಷ್ಟಕರ ಸಂಗತಿ ಎಂದಿದ್ದಾರೆ.
ಇಲ್ಲಿನ ಶ್ವೇತಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಟ್ರಂಪ್, ಕ್ಸಿ ಅವರನ್ನು ನನ್ನ ಉತ್ತಮ ಸ್ನೇಹಿತನಂತೆ ಭಾವಿಸಿದ್ದೇನೆ ಮತ್ತು ಚೀನಾದ ಅಧ್ಯಕ್ಷರೂ ಸಹಾ ಅಮೆರಿಕವನ್ನು ಗೌರವಿಸುತ್ತಾರೆ ಎಂದಿದ್ದಾರೆ. ಚೀನಾದಲ್ಲಿ ಹುಟ್ಟಿದ ಕೊರೊನಾ ವೈರಸ್ನಿಂದಾಗಿ ಇಡೀ ಜಗತ್ತು ಸಂಕಷ್ಟ ಎದುರಿಸುತ್ತಿದೆ. ಇದರಿಂದ ಅನೇಕರು ಅಸಮಾಧಾನಗೊಂಡಿದ್ದಾರೆ. ಆದರೆ ನಾನು ಕ್ಸಿ ಹಾಗೂ ಚೀನಾವನ್ನು ಬಹಳವಾಗಿ ಗೌರವಿಸುತ್ತೇನೆ ಎಂದಿದ್ದಾರೆ.
ಈ ಕುರಿತು ಮಾತನಾಡಿದ ಅಮೆರಿಕದ ಅರೋಗ್ಯ ಕಾರ್ಯದರ್ಶಿ ಅಲೆಕ್ಸ್ ಅಜರ್, ಚೀನಾದಲ್ಲಿ 45 ಜನರಿಗೆ ಕೊರೊನಾ ಸೋಂಕಿನ ಕುರಿತು ವಿಶ್ವ ಆರೋಗ್ಯ ಸಂಸ್ಥೆಗೆ ಮಾಹಿತಿ ನೀಡಿದ 2 ವಾರಗಳಲ್ಲಿಯೇ ನಾವು ವಿದೇಶದಿಂದ ಬರುವವರ ಸ್ಕ್ರೀನಿಂಗ್ ನಡೆಸಲು ಮುಂದಾಗಿದ್ದೆವು.
ಬಳಿಕ ವೈರಸ್ ಪ್ರಕರಣಗಳು ಉಲ್ಭಣಗೊಂಡಾಗ ಚೀನಾ, ಇರಾನ್ ಮತ್ತು ಯೂರೋಪ್ನಿಂದ ಮರಳಿ ಬರುವವರ ಮೇಲೆ ನಿರ್ಬಂಧ ಹೇರಲಾಗಿತ್ತು. ನಮ್ಮ ಆರೋಗ್ಯ ತಜ್ಞರ ಪ್ರಕಾರ ಈ ಮುನ್ನೆಚ್ಚರಿಕಾ ಕ್ರಮಗಳು ವೈರಸ್ ಹರಡುವಿಕೆಯನ್ನು ತಡೆಯುವಲ್ಲಿ ಪರಿಣಾಮಕಾರಿಯಾದವು ಎಂದಿದ್ದಾರೆ.
ಈವರೆಗೆ ಅಮೆರಿಕದಲ್ಲಿ ಕೊರೊನಾ ಮಹಾಮಾರಿಗೆ 230 ಮಂದಿ ಸಾವಿಗೀಡಾಗಿದ್ದರೆ 18 ಸಾವಿರ ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದಲ್ಲದೆ ವಿಶ್ವದಾದ್ಯಂತ ಸುಮಾರು 11 ಸಾವಿರಕ್ಕೂ ಅಧಿಕ ಜನ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ.