ವಾಷಿಂಗ್ಟನ್ ಡಿಸಿ( ಅಮೆರಿಕ): ಇರಾನ್ ದೇಶವೂ ಪರಮಾಣು ಶಸ್ತ್ರಾಸ್ತ್ರಗಳ ಅನ್ವೇಷಣೆ ನಿಲ್ಲಸಬೇಕು. ಈ ಮೂಲಕ ಭಯೋತ್ಪಾದನೆ, ಸಾವು- ನೋವು ಹಾಗೂ ವಿನಾಶವನ್ನು ನಿಲ್ಲಿಸಬಹುದಾಗಿದೆ, ಅಲ್ಲದೇ ಒಳ್ಳೆಯದಕ್ಕಾಗಿ ಕೆಲಸ ಮಾಡಲು ಮುಂದಾಗಬೇಕೆಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಅಮೆರಿಕ ಸಂಸತ್ನ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಿ ಡೊನಾಲ್ಡ್ ಟ್ರಂಪ್, ಇತ್ತೀಚಿನ ದಿನಗಳಲ್ಲಿ ಇರಾನಿಯನ್ನರು ದಬ್ಬಾಳಿಕೆ ವಿರುದ್ಧ ಧ್ವನಿ ಎತ್ತಿರುವುದು ಸಂತೋಷಕರ ಸಂಗತಿಯಾಗಿದೆ. ನಮ್ಮ ಪ್ರಬಲ ನಿರ್ಬಂಧಗಳಿಂದಾಗಿ, ಇರಾನಿನ ಆರ್ಥಿಕತೆ ತುಂಬಾ ಕಳಪೆಯಾಗಿ ಕಾರ್ಯನಿರ್ವಹಿಸುತ್ತಿದೆ. ಅಲ್ಪಾವಧಿಯಲ್ಲಿಯೇ ಅದನ್ನು ಉತ್ತಮಗೊಳಿಸಲು ನಾವು ಅವರಿಗೆ ಸಹಾಯ ಮಾಡುತ್ತೇವೆ. ಆದ್ರೆ ಅವರು ಯಾವ ದಾರಿಯನ್ನು ಆರಿಸಿಕೊಂಡು ಮುಂದೆ ಸಾಗುತ್ತಾರೆ ಎಂಬುದು ಅವರಿಗೆ ಬಿಟ್ಟಿದ್ದು ಎಂದಿದ್ದಾರೆ.
2008 ರ ಈಸ್ಟರ್ ಭಾನುವಾರದ ದಿನದಂದು ರಸ್ತೆಬದಿಯ ಬಾಂಬ್ ದಾಳಿಯಲ್ಲಿ ಮೃತಪಟ್ಟ ಸೇನಾ ಸಿಬ್ಬಂದಿ ಸಾರ್ಜೆಂಟ್ ಕ್ರಿಸ್ಟೋಫರ್ ಹೇಕ್ ಅವರ ಪತ್ನಿ ಮತ್ತು ಮಗನನ್ನು ಅಧ್ಯಕ್ಷರು ಪರಿಚಯಿಸಿದಾಗ ಈ ಹೇಳಿಕೆ ನೀಡಿದ್ದಾರೆ. ಸಾರ್ಜೆಂಟ್ ಕ್ರಿಸ್ಟೋಫರ್ ಹೇಕ್ ಇವರ ಸಾವಿಗೆ ಭಯೋತ್ಪಾದಕರೇ ಪ್ರಮುಖ ಕಾರಣ. ಆದ್ರೆ ಅವರಿಗೆ ಇಂತ ಭಯಾನಕ ಬಾಂಬ್ ನೀಡಿದವರು ಯಾರೆಂದು ಟ್ರಂಪ್ ಪ್ರಶ್ನಿಸಿದ್ದಾರೆ.
ವಿಶ್ವದ ಅಗ್ರ ಭಯೋತ್ಪಾದಕ, ಸುಲೇಮಾನಿ ಅಸಂಖ್ಯಾತ ಪುರುಷರ, ಮಹಿಳೆಯರು ಮತ್ತು ಮಕ್ಕಳ ಸಾವಿಗೆ ಕಾರಣವಾಗಿದ್ದಾನೆ. ಹಾಗಾಗಿ ಅವನನ್ನು ಕೊಲ್ಲಲಾಯಿತು. ಈ ಮೂಲಕ ಅವನ ಭಯೋತ್ಪಾದನೆಯ ದುಷ್ಟ ಆಳ್ವಿಕೆಯನ್ನು ಶಾಶ್ವತವಾಗಿ ಗೊನೆಗೊಳಿಸಲು ಸಾಧ್ಯವಾಯಿತೆಂದು ಟ್ರಂಪ್ ಹೇಳಿದ್ದಾರೆ.
ಟ್ರಂಪ್ ನೀವು ನಮ್ಮ ನಾಗರಿಕರ ಮೇಲೆ ದಾಳಿ ಮಾಡಿದ್ರೆ, ನಮ್ಮಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ನಿಮ್ಮ ಜೀವವನ್ನು ಖಂಡಿತವಾಗಿಯೂ ಕಳೆದುಕೊಳ್ಳುತ್ತೀರಿ ಎಂದು ಟ್ರಂಪ್ ಭಯೋತ್ಪಾದಕರಿಗೆ ಎಚ್ಚರಿಕೆ ಸಂದೇಶ ನೀಡಿದ್ದಾರೆ.