ಟೊರೊಂಟೊ(ಕೆನಡಾ): ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಕಳೆದ ಶುಕ್ರವಾರ ಜನಾಂಗೀಯ ವಿರೋಧಿ ಪ್ರತಿಭಟನಾ ರ್ಯಾಲಿಯಲ್ಲಿ ಪಾಲ್ಗೊಂಡು, ಪ್ರತಿಭಟನಾಕಾರರೊಂದಿಗೆ ಸೇರಿ ಮಂಡಿಯೂರಿ ನಿಂತು ಪ್ರತಿಭಟನೆ ನಡೆಸಿದರು.
ಕಪ್ಪು ಮಾಸ್ಕ್ ಧರಿಸಿ ತಮ್ಮ ಭದ್ರತಾ ಸಿಬ್ಬಂದಿಯೊಂದಿಗೆ ಒಟ್ಟಾವಾದ ಪಾರ್ಲಿಮೆಂಟ್ ಹಿಲ್ಗೆ ಬಂದ ಅವರೊಂದಿಗೆ, ಕೆಲ ಪ್ರತಿಭಟನಾಕಾರರು ಮಂಡಿಯೂರಲು ವಿನಂತಿಸಿದರು. ಅದರಂತೆಯೇ ಪ್ರಧಾನಿ ಮಂಡಿಯೂರಿ ವರ್ಣಭೇದ ನೀತಿ ವಿರೋಧಿ ಪ್ರತಿಭಟನೆಯನ್ನು ಬೆಂಬಲಿಸಿದರು. ಇದರಿಂದ ಸಂತಸಗೊಂಡ ಪ್ರತಿಭಟನಾಕಾರರು ಪ್ರಧಾನಿಗೆ ಧನ್ಯವಾದ ಅರ್ಪಿಸಿದರು.
ಈ ವೇಳೆ ಮಾತನಾಡಿದ ಅವರು, ಕಳೆದ ಕೆಲ ದಿನಗಳಲ್ಲಿ ಅಮೆರಿಕದಲ್ಲಿ ಏನೆಲ್ಲ ನಡೆಯುತ್ತಿದೆ ಎಂದು ಕೆನಡಾ ನಾಗರಿಕರು ನೋಡುತ್ತಿದ್ದಾರೆ ಎಂದರು. ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಕಪ್ಪು ವರ್ಣೀಯನ ಹತ್ಯೆ ಸಂಬಂಧ ಪ್ರತಿಭಟಿಸುತ್ತಿರುವವರ ವಿರುದ್ಧ ಅಶ್ರುವಾಯು ಪ್ರಯೋಗಿಸಿದ ಬಗ್ಗೆ ಕೇಳಿದಾಗ ಟ್ರುಡೊ ಕೆಲ ಸೆಕೆಂಡುಗಳ ಕಾಲ ಪ್ರತಿಕ್ರಿಯೆ ನೀಡುವಲ್ಲಿ ನಿಧಾನಿಸಿದರು.
ಜಾರ್ಜ್ ಫ್ಲಾಯ್ಡ್ ಹತ್ಯೆ ಸಂಬಂಧ ಅಮೆರಿಕದ ಹಲವು ನಗರಗಳಲ್ಲಿ ವರ್ಣಭೇದ ನೀತಿ ಮತ್ತು ಪೊಲೀಸ್ ದೌರ್ಜನ್ಯದ ವಿರುದ್ಧ ಭಾರಿ ಮಟ್ಟದ ಆಕ್ರೋಶ ವ್ಯಕ್ತವಾಗುತ್ತಿದೆ. ಹೀಗಾಗಿ ಕೆನಡಾದಲ್ಲೂ ಈ ಬಗ್ಗೆ ವಿರೋಧ ವ್ಯಕ್ತವಾಗುತ್ತಿದೆ.
ಇನ್ನೊಂದೆಡೆ ಟೊರೊಂಟೊ ಪೊಲೀಸ್ ಮುಖ್ಯಸ್ಥ ಮಾರ್ಕ್ ಸೌಂಡರ್ಸ್ ಹಾಗೂ ಇತರ ಅಧಿಕಾರಿಗಳು ಪ್ರತಿಭಟನಾಕಾರರನ್ನು ಭೇಟಿಯಾದರು. ನಂತರ ಟೋಪಿ ತೆಗೆದು, ಪೊಲೀಸ್ ಪ್ರಧಾನ ಕಚೇರಿಯ ಬಳಿ ಮೊಣಕಾಲೂರಿ ಪ್ರತಿಭಟನೆ ಬೆಂಬಲಿಸಿದರು.