ಚಿಯಾಪಾಸ್(ಮೆಕ್ಸಿಕೋ): ವಲಸಿಗರನ್ನು ಹೊತ್ತು ಸಾಗುತ್ತಿದ್ದ ಸರಕು ಸಾಗಣೆ ಟ್ರಕ್ ಉರುಳಿ, ಪಾದಚಾರಿ ಸೇತುವೆಗೆ ಡಿಕ್ಕಿಯಾಗಿ ಸುಮಾರು 49 ಮಂದಿ ಸಾವನ್ನಪ್ಪಿ, 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ದಕ್ಷಿಣ ಮೆಕ್ಸಿಕೋದಲ್ಲಿ ನಡೆದಿದೆ.
ಟ್ರಕ್ನಲ್ಲಿದ್ದವರು ಮಧ್ಯ ಅಮೇರಿಕನ್ ವಲಸಿಗರು ಎಂದು ಹೇಳಲಾಗುತ್ತಿದೆ. ಗಾಯಾಳುಗಳನ್ನು ಅಲ್ಲಿನ ಸ್ಥಳೀಯ ಆಸ್ಪತ್ರೆಗಳಿಗೆ ರವಾನಿಸಲಾಗಿದೆ ಎಂದು ಚಿಯಾಪಾಸ್ ರಾಜ್ಯದ ಸಿವಿಲ್ ಡಿಫೆನ್ಸ್ ಕಛೇರಿಯ ಮುಖ್ಯಸ್ಥ ಲೂಯಿಸ್ ಮ್ಯಾನುಯೆಲ್ ಮೊರೆನೊ ಮಾಧ್ಯಮಗಳಿಗೆ ತಿಳಿಸಿದರು.
ಚಿಯಾಪಾಸ್ ರಾಜ್ಯದ ರಾಜಧಾನಿ ಟಕ್ಸ್ಟ್ಲಾ ಗುಟಿರೆಜ್ ಕಡೆಗೆ ತೆರಳುವ ಹೆದ್ದಾರಿಯಲ್ಲಿ ಈ ಅಪಘಾತ ಸಂಭವಿಸಿದೆ. ನತದೃಷ್ಟ ವಾಹನದಲ್ಲಿದ್ದವರು ಮಧ್ಯ ಅಮೆರಿಕದ ವಲಸಿಗರು ಎಂದು ಹೇಳಲಾಗುತ್ತಿದೆ. ಆದರೆ ಅವರ ರಾಷ್ಟ್ರೀಯತೆಯನ್ನು ಅಲ್ಲಿನ ಸರ್ಕಾರ ದೃಢಪಡಿಸಿಲ್ಲ. ಅಪಘಾತದಲ್ಲಿ ಬದುಕುಳಿದ ಕೆಲವರು ಗ್ವಾಟೆಮಾಲಾದಿಂದ ಬಂದವರು ಎಂದು ಮೊರೆನೊ ಹೇಳಿದ್ದಾರೆ.
ಟ್ರಕ್ನಲ್ಲಿ ಅತಿ ಹೆಚ್ಚು ಜನರನ್ನು ತುಂಬಲಾಗಿತ್ತು. ಅತ್ಯಂತ ಹೆಚ್ಚಿನ ಭಾರವೇ ಅವಘಡಕ್ಕೆ ಕಾರಣವಾಗಿದೆ. ದುರ್ಘಟನೆಯ ವೇಳೆ ಸುಮಾರು 107 ಮಂದಿ ಟ್ರಕ್ನಲ್ಲಿದ್ದರು ಎಂದು ತಿಳಿದುಬಂದಿದೆ. ದಕ್ಷಿಣ ಮೆಕ್ಸಿಕೋದಲ್ಲಿ ಸರಕು ಸಾಗಣೆ ಟ್ರಕ್ಗಳಲ್ಲಿ ವಲಸಿಗರ ಕಳ್ಳಸಾಗಣೆ ಸಾಮಾನ್ಯವಾಗಿದ್ದು, ಇದೇ ರೀತಿ ನಡೆದಿದೆ ಎಂದು ಅಂದಾಜಿಸಲಾಗಿದೆ.
ಈ ಘಟನೆ ನಡೆದ ಸ್ಥಳಕ್ಕೆ ರಕ್ಷಣಾ ತಂಡಗಳು ಆಗಮಿಸಿದಾಗ ಸಾಕಷ್ಟು ಮಂದಿ ವಲಸಿಗರಿದ್ದರು. ಇದಾದ ಸ್ವಲ್ಪ ಸಮಯದ ನಂತರ ಕೆಲವರು ಬಂಧನ ಭೀತಿಯಿಂದ ಸ್ಥಳದಿಂದ ಪರಾರಿಯಾಗಿದ್ದು, ಇನ್ನೂ ಕೆಲವರು ಪೊಲೀಸರಿಂದ ತಪ್ಪಿಸಿಕೊಳ್ಳಲು ಚಿಕಿತ್ಸೆ ಪಡೆದು, ಗಾಯಗಳಿದ್ದರೂ ಪರಾರಿಯಾಗಿದ್ದಾರೆ ಎಂದು ವೈದ್ಯರೊಬ್ಬರು ಮಾಹಿತಿ ನೀಡಿದರು.
ಇದನ್ನೂ ಓದಿ: ಗ್ವಾದರ್‌ನಲ್ಲಿ ಯಾವುದೇ ಸೇನಾ ನೆಲೆಗಳನ್ನು ಚೀನಾಗೆ ನೀಡಲ್ಲ: ಪಾಕ್ ಎನ್ಎಸ್‌ಎ ಸ್ಪಷ್ಟನೆ