ಪೋರ್ಟ್-ಔ-ಪ್ರಿನ್ಸ್: ಹೈಟಿಯಲ್ಲಿ ಶನಿವಾರ ಸಂಭವಿಸಿದ ಭಾರಿ ಭೂಕಂಪದಿಂದ ಸಾವಿನ ಸಂಖ್ಯೆ 1,297ಕ್ಕೆ ಏರಿದೆ ಎಂದು ಹೈಟಿಯ ನಾಗರಿಕ ರಕ್ಷಣಾ ಸಂಸ್ಥೆಯ ಮುಖ್ಯಸ್ಥ ಜೆರ್ರಿ ಚಾಂಡ್ಲರ್ ಹೇಳಿದ್ದಾರೆ.
ಪ್ರಕೃತಿಯ ಮುನಿಸಿಗೆ 2,800ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಅಂತರಾಷ್ಟ್ರೀಯ ಸುದ್ದಿ ಮಾಧ್ಯಮ ಸಿಎನ್ಎನ್ ವರದಿ ಮಾಡಿದೆ. ದೇಶದ ದಕ್ಷಿಣ ಭಾಗದಲ್ಲಿ ಹೆಚ್ಚಿನ ಸಾವುಗಳು ಸಂಭವಿಸಿದ್ದು, 500 ಜನರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಭೂಕಂಪವು 2,868 ಮನೆಗಳನ್ನು ನಾಶಪಡಿಸಿದೆ. 5,410 ಮನೆಗಳು ತೀವ್ರ ರೀತಿಯಲ್ಲಿ ಹಾನಿಗೊಳಗಾಗಿವೆ. ಆಸ್ಪತ್ರೆಗಳು ಸಹ ಭೂಕಂಪದಿಂದ ಹಾನಿಗೊಂಡಿವೆ. ಹಲವೆಡೆ ರಸ್ತೆ ಸಂಚಾರ ಸ್ಥಗಿತಗೊಂಡಿದೆ.
"ವೈದ್ಯಕೀಯ ಅಗತ್ಯಗಳನ್ನು ಪೂರೈಸಲು ಔಷಧಿಗಳನ್ನು ಮತ್ತು ವೈದ್ಯಕೀಯ ಸಿಬ್ಬಂದಿಯನ್ನು ಪೀಡಿತ ಪ್ರದೇಶಗಳಿಗೆ ಕಳುಹಿಸಲು ಆರಂಭಿಸಿದ್ದೇವೆ" ಎಂದು ಹೈಟಿ ಪ್ರಧಾನಿ ಏರಿಯಲ್ ಹೆನ್ರಿ ಹೇಳಿದ್ದಾರೆ.
ಇದನ್ನೂ ಓದಿ: ಹೈಟಿಯಲ್ಲಿ ಪ್ರಬಲ ಭೂಕಂಪ: 304 ಮಂದಿ ಸಾವು, ತುರ್ತು ಪರಿಸ್ಥಿತಿ ಘೋಷಣೆ