ವಾಷಿಂಗ್ಟನ್ (ಯುಎಸ್): ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರ ಅಧಿಕೃತ ನಿವಾಸವಾದ ಯುಎಸ್ ನೇವಲ್ ಅಬ್ಸರ್ವೇಟರಿಯ ಹೊರಗೆ ಟೆಕ್ಸಾಸ್ ಮೂಲದ ವ್ಯಕ್ತಿಯನ್ನು ವಾಷಿಂಗ್ಟನ್ ಡಿಸಿ ಪೊಲೀಸರು ಬುಧವಾರ ಬಂಧಿಸಿದ್ದಾರೆ. ಬಂಧಿತನ ವಾಹನದಿಂದ ಬಂದೂಕು ಮತ್ತು ಮದ್ದು ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.
ವಾಷಿಂಗ್ಟನ್‌ನ ಮೆಟ್ರೋಪಾಲಿಟನ್ ಪೊಲೀಸರ ಹೇಳಿಕೆ ಉಲ್ಲೇಖಿಸಿ, ಸಿಎನ್‌ಎನ್ ವರದಿ ಮಾಡಿದೆ. ಅಧಿಕಾರಿಗಳು ಮಧ್ಯಾಹ್ನ 12. 12 ರ ಸುಮಾರಿಗೆ ಈ ಬಗ್ಗೆ ಮಾಹಿತಿ ನೀಡಿದ್ದು, ಟೆಕ್ಸಾಸ್ ಮೂಲದ ವ್ಯಕ್ತಿಯನ್ನು ಕಮಲಾ ಹ್ಯಾರಿಸ್ ಮನೆಯ ಬಳಿಯಿಂದ ಗುಪ್ತಚರ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ.
ಪಾಲ್ ಮರ್ರೆ (31) ಬಂಧಿತ ಆರೋಪಿ. ಆತನ ವಾಹನದಿಂದ ಬಂದೂಕು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮರ್ರಿಯ ಮೇಲಿದೆ ಹಲವಾರು ಕೇಸುಗಳು: ಅಪಾಯಕಾರಿ ಆಯುಧಗಳ ಸಾಗಾಟ, ರೈಫಲ್ ಅಥವಾ ಶಾಟ್‌ಗನ್ ವ್ಯವಹಾರ, ನೋಂದಾಯಿಸದ ಮದ್ದುಗುಂಡುಗಳ ಬಳಕೆ ಮತ್ತು ದೊಡ್ಡ ಸಾಮರ್ಥ್ಯದ ಮದ್ದುಗುಂಡು ಸಾಧನವನ್ನು ಹೊಂದಿರುವ ಆರೋಪದ ಮೇಲೆ ಈತನ ವಿರುದ್ಧ ಪ್ರಕರಣಗಳು ದಾಖಲಾಗಿವೆ.
ಯುಎಸ್ ಸೀಕ್ರೆಟ್ ಸರ್ವೀಸ್ ಪ್ರಕಾರ, ಮೆಟ್ರೋಪಾಲಿಟನ್ ಪೊಲೀಸರು ಘಟನಾ ಸ್ಥಳಕ್ಕೆ ಬರುವ ಮೊದಲು ಯೂನಿಫಾರ್ಮ್ಡ್ ವಿಭಾಗದ ಅಧಿಕಾರಿಗಳು ಆ ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದರು.