ವಾಷಿಂಗ್ಟನ್: ತೃತೀಯ ಲಿಂಗಿಗಳು (ಎಲ್ಜಿಬಿಟಿ) ಕೆಲಸದ ಸಮಾನ ಹಕ್ಕುಗಳಿವೆ ಎಂದು ಅಮೆರಿಕದ ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ. ತೃತೀಯ ಲಿಂಗಿಗಳಿಗೆ ಕೆಲಸದಲ್ಲಿ ಸಮಾನ ಹಕ್ಕು ನೀಡುವ ಕುರಿತಾಗಿ ವಿಚಾರಣೆ ನಡೆಸಿದ ಪೀಠ, 6-3 ಮತಗಳ ಅಂತರದಿಂದ ಈ ಆದೇಶ ನೀಡಿದೆ.
ನಾಗರಿಕ ಹಕ್ಕುಗಳ ಕಾಯ್ದೆ 1964 ಯಲ್ಲಿ ಹೇಳಲಾಗಿರುವ ಟೈಟಲ್ 7 ರಲ್ಲಿ, ಲಿಂಗ ಹಾಗೂ ಅದಕ್ಕೆ ಸಂಬಂಧಿಸಿದ ಯಾವುದೇ ಕಾರಣಗಳಿಗಾಗಿ ವ್ಯಕ್ತಿಗಳಿಗೆ ನೌಕರಿಯಲ್ಲಿ ತಾರತಮ್ಯ ಮಾಡುವಂತಿಲ್ಲ ಎಂದು ಹೇಳಿದೆ. ಹೀಗಾಗಿ ಲೈಂಗಿಕ ಆಕಾಂಕ್ಷೆ ಅಥವಾ ಲಿಂಗ ಗುರುತಿನ ಆಧಾರದಲ್ಲಿ ವ್ಯಕ್ತಿಗಳಿಗೆ ಕೆಲಸದಲ್ಲಿ ತಾರತಮ್ಯ ಮಾಡುವುದನ್ನು ಈ ಕಾಯ್ದೆ ನಿಷೇಧಿಸುತ್ತದೆ ಎಂದು ಕೋರ್ಟ್ ಹೇಳಿದೆ.
ಸಲಿಂಗಕಾಮಿ ಅಥವಾ ಲಿಂಗ ಪರಿವರ್ತಿತ ವ್ಯಕ್ತಿಯೊಬ್ಬನನ್ನ ಅದೇ ಕಾರಣಕ್ಕಾಗಿ ಕಂಪನಿಯೊಂದು ಕೆಲಸದಿಂದ ವಜಾ ಮಾಡಿದಾಗ ಇತರ ಲೈಂಗಿಕ ಗುಂಪಿನ ಜನತೆ ಅದನ್ನು ಪ್ರಶ್ನಿಸುತ್ತಿರಲಿಲ್ಲ.
ಸುಪ್ರೀಂಕೋರ್ಟ್ನ ಈ ಆದೇಶವು ದೇಶದ ಉದ್ಯೋಗದಾತರು ಹಾಗೂ ಟ್ರಂಪ್ ಆಡಳಿತಕ್ಕೆ ಉಂಟಾದ ಭಾರಿ ಹಿನ್ನಡೆ ಎಂದು ವ್ಯಾಖ್ಯಾನಿಸಲಾಗುತ್ತಿದೆ. ಆದರೂ ಕೋರ್ಟಿನ ಪ್ರಬಲ ಆದೇಶವನ್ನು ತಾವು ಒಪ್ಪಿಕೊಂಡಿರುವುದಾಗಿ ಟ್ರಂಪ್ ಹೇಳಿಕೆ ನೀಡಿದ್ದಾರೆ.
ಇಂದಿನ ಈ ಆದೇಶದಿಂದ ದೇಶದ 8.1 ಮಿಲಿಯನ್ ಎಲ್ಜಿಬಿಟಿ ಸಮುದಾಯದ ಕೆಲಸಗಾರರಿಗೆ ಅನುಕೂಲವಾಗಲಿದೆ. ದೇಶದ ಬಹುತೇಕ ರಾಜ್ಯಗಳಲ್ಲಿ ಇವರಿಗೆ ಕೆಲಸದ ಭದ್ರತೆ ಇರಲಿಲ್ಲ. ಇನ್ನು ಇವರೆಲ್ಲರಿಗೂ ಲಿಂಗ ತಾರತಮ್ಯವಿಲ್ಲದೇ ಎಲ್ಲರಂತೆ ಕೆಲಸದ ಭದ್ರತೆ ಸಿಗಲಿದೆ. ಯುಸಿಎಲ್ಎ ಲಾ ಸ್ಕೂಲ್ನ ಸಮೀಕ್ಷೆಯ ಪ್ರಕಾರ ಅಮೆರಿಕದಲ್ಲಿ ಒಟ್ಟು 11.3 ಮಿಲಿಯನ್ ಎಲ್ಜಿಬಿಟಿ ಸಮುದಾಯದ ಜನ ಇದ್ದಾರೆ ಎಂದು ಹೇಳಲಾಗಿದೆ.