ಅಟ್ಲಾಂಟಾ (ಯುಎಸ್ಎ): ಇತರರಿಗೆ ಹೋಲಿಸಿದರೆ ವಯಸ್ಸಾದವರು ಸೋಂಕು ತಗುಲಬಹುದೆಂದು ಚಿಂತೆ ಮಾಡುವ ಸಾಧ್ಯತೆ ಕಡಿಮೆ ಇರುವುದರಿಂದ ಅವರಿಗೆ ಕೊರೊನಾ ತಗುಲುವ ಅಪಾಯ ಹೆಚ್ಚಿದೆ ಎಂದು ಜಾರ್ಜಿಯಾ ಸ್ಟೇಟ್ ಯೂನಿವರ್ಸಿಟಿಯ ಸಂಶೋಧಕರ ಹೊಸ ಅಧ್ಯಯನವೊಂದು ತಿಳಿಸಿದೆ.
ಜೆರೊಂಟಾಲಜಿ ಮತ್ತು ಸೈಕಾಲಜಿ ಸಂಶೋಧಕರಾದ ಸಾರಾ ಬಾರ್ಬರ್ ಅವರು ಈ ಅಧ್ಯಯನ ನಡೆಸಿದ್ದು, ಇದು ಕೋವಿಡ್-19 ಕುರಿತಾದ ಆನ್‌ಲೈನ್ ಪ್ರಶ್ನಾವಳಿಯನ್ನು ಹೊಂದಿತ್ತು. ಅಧ್ಯಯನದ ಫಲಿತಾಂಶಗಳನ್ನು ದಿ ಜರ್ನಲ್ಸ್ ಆಫ್ ಜೆರೊಂಟಾಲಜಿ ಪ್ರಕಟಿಸಿದೆ.
146 ಕಿರಿಯ ವಯಸ್ಕರು (18-35) ಮತ್ತು 156 ಹಿರಿಯ ವಯಸ್ಕರು (65-81) ಭಾಗವಹಿಸಿದ್ದು, ಕೋವಿಡ್-19 ತೀವ್ರತೆಯ ಕುರಿತ ಪ್ರಶ್ನೆಗಳಿಗೆ ಅವರು ಉತ್ತರಿಸಿದರು. ಭಾಗವಹಿಸಿದವರು ತಾವು ಮತ್ತು ತಮ್ಮ ಕುಟುಂಬದ ಸದಸ್ಯರು ಸೋಂಕಿಗೆ ಒಳಗಾಗುವ ಸಾಧ್ಯತೆಯ ಬಗ್ಗೆ ಎಷ್ಟರ ಮಟ್ಟಿಗೆ ಚಿಂತಿತರಾಗಿದ್ದಾರೆ ಎಂಬುದನ್ನು ಅಧ್ಯಯನವು ನಿರ್ಣಯಿಸಿದೆ.
ಸಂಶೋಧನೆಯಲ್ಲಿ ಭಾಗವಹಿಸಿದ ವಯಸ್ಸಾದ ಪುರುಷರು ರೋಗದ ಬಗ್ಗೆ ಕಡಿಮೆ ಚಿಂತೆ ಮಾಡುತ್ತಾರೆ. ಅವರು ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಸಾಧ್ಯತೆ ಕಡಿಮೆ ಇದೆ ಎಂದು ಸಂಶೋಧನೆ ತಿಳಿಸಿದೆ.