ವಾಷಿಂಗ್ಟನ್: ಕೋವಿಡ್ ಪರಿಸ್ಥಿತಿಗೆ ಸಂಬಂಧಪಟ್ಟಂತೆ ಭಾರತದಿಂದ ಕೇಳಿ ಬರುತ್ತಿರುವ ಸುದ್ದಿಗಳು ಹೃದಯವಿದ್ರಾವಕ ಮತ್ತು ಭಯಾನಕವಾಗಿವೆ ಎಂದು ಅಮೆರಿಕದ ಸರ್ಜನ್ ಜನರಲ್ ವಿವೇಕ್ ಮೂರ್ತಿ ಹೇಳಿದ್ದಾರೆ.
7 ಮಂದಿ ಕುಟುಂಬ ಸದಸ್ಯರನ್ನು ಕಳೆದುಕೊಂಡ ಮೂರ್ತಿ
ಎರಡನೇ ಬಾರಿಗೆ ಯುಎಸ್ ಸರ್ಜನ್ ಜನರಲ್ ಆಗಿರುವ ಭಾರತೀಯ-ಅಮೆರಿಕನ್ ವಿವೇಕ್ ಮೂರ್ತಿ, ಅಮೆರಿಕ ಮತ್ತು ಭಾರತದಲ್ಲಿ ಕೋವಿಡ್ ಸೋಂಕಿನಿಂದ ತನ್ನ ಕುಟುಂಬದ ಏಳು ಸದಸ್ಯರನ್ನು ಕಳೆದುಕೊಂಡಿದ್ದಾರೆ.
ನಾವು ಪ್ರತಿದಿನ ನಮ್ಮ ಕುಟುಂಬಸ್ಥರೊಂದಿಗೆ ಮಾತನಾಡುತ್ತಿದ್ದೇವೆ. ಭಾರತದಲ್ಲಿ ಜನರು ನಿಜವಾಗಿಯೂ ಸಂಕಷ್ಟದಲ್ಲಿದ್ದಾರೆ. ಅಲ್ಲಿಂದ ಹೊರ ಬರುತ್ತಿರುವ ಸುದ್ದಿಗಳು ಕಳವಳಕಾರಿಯಾಗಿವೆ. ಅಂತಹ ಸುದ್ದಿಗಳು ನಮ್ಮ ದೇಶ ಮತ್ತು ಸಮುದಾಯದಿಂದ ಬರಬಾರದೆಂದು ನಾವು ಬಯಸುತ್ತೇವೆ ಎಂದು ಮೂರ್ತಿ ಮಾಧ್ಯಮಗಳೊಂದಿಗೆ ಮಾತನಾಡುವಾಗ ತಿಳಿಸಿದ್ದಾರೆ.
ಸದ್ಯ, ಭಾರತದಲ್ಲಿ ಪ್ರತಿದಿನ 3,50,000 ಕ್ಕೂ ಅಧಿಕ ಜನರು ಸೋಂಕಿಗೆ ಒಳಗಾಗುತ್ತಿದ್ದಾರೆ. ಹೆಚ್ಚಿನ ಜನರು ನಗರ ಪ್ರದೇಶಗಳ ಅಸ್ಪತ್ರೆಗಳತ್ತ ಧಾವಿಸುತ್ತಿದ್ದಾರೆ. ಆದರೆ, ಅವರ ಬೇಡಿಕೆಗಳನ್ನು ಪೂರೈಸಲು ಆಗುತ್ತಿಲ್ಲ. ಹಾಗಾಗಿ, ಜನ ಆಕ್ಸಿಜನ್ ಸಿಗದೆ ಪರದಾಡುತ್ತಿದ್ದಾರೆ ಎಂದು ಮೂರ್ತಿ ಹೇಳಿದ್ದಾರೆ.
ಇದನ್ನೂ ಓದಿ: ಭಾರತಕ್ಕೆ 100 ಮಿಲಿಯನ್ ಡಾಲರ್ ಮೌಲ್ಯದ ವೈದ್ಯಕೀಯ ಸಾಮಗ್ರಿ ಪೂರೈಸಲಿರುವ ಅಮೆರಿಕ
ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಯುಎಸ್ ಭಾರತದ ನೆರವಿಗೆ ಧಾವಿಸಿರುವುದು ಸಂತಸದ ವಿಷಯ. ಬೈಡನ್ ಸರ್ಕಾರವು ಸಿಡಿಸಿ ಮತ್ತು ಯುಎಸ್ಐಐಡಿ ಇಂಟರ್ನ್ಯಾಷನಲ್ ಡೆವಲಪ್ಮೆಂಟ್ನಿಂದ ವಿಶೇಷ ತಂಡಗಳನ್ನು ಭಾರತದ ಸಹಾಯಕ್ಕೆ ಕಳುಹಿಸಲಿದೆ. ಭಾರತದ ಪ್ರಯೋಗಾಲಯಗಳ ಸಾಮರ್ಥ್ಯ ಬಲಪಡಿಸಲು, ಸೋಂಕು ತಡೆಗಟ್ಟುವಿಕೆ ಮತ್ತು ನಿಯಂತ್ರಣಕ್ಕೆ ಸಹಾಯ ಮಾಡಲು ಈ ತಂಡಗಳು ಸಹಾಯ ಮಾಡಲಿವೆ ಎಂದು ಅವರು ಮೂರ್ತಿ ತಿಳಿಸಿದರು.