ನ್ಯೂಯಾರ್ಕ್: ಜಗತ್ತಿನೆಲ್ಲೆಡೆ ಕೊರೊನಾ ರೂಪಾಂತರಿ ಇದೀಗ ಭೀತಿ ಹುಟ್ಟಿಸುತ್ತಿದ್ದು, ಷೇರುಪೇಟೆ ಮೇಲೆ ಭಾರಿ ಕರಿಛಾಯೆ ಬೀರುವಂತೆ ಮಾಡಿದೆ. ಈ ಹಿಂದೆ ಜಾಗತಿಕ ಆರ್ಥಿಕತೆಗೆ ಕೊರೊನಾ ಬಲವಾದ ಪೆಟ್ಟು ನೀಡಿತ್ತು. ಇದೀಗ ರೂಪಾಂತರಿಗಳು ಷೇರು ಮಾರುಕಟ್ಟೆ ಮೇಲೆ ತನ್ನ ಕರಿಛಾಯೆ ಬೀರಲಾರಂಭಿಸಿವೆ.
ಎಸ್ ಅಂಡ್ ಪಿ 500 ಷೇರು 68.67 ಅಂಕ ಅಥವಾ ಶೇ.1.6 ರಷ್ಟು ಕುಸಿದು 4,258.49ಕ್ಕೆ ತಲುಪಿದೆ. 10 ವರ್ಷಗಳ ಏರುಗತಿಯ ಹಾದಿಯಲ್ಲಿ ಇಂದು ಮಾರುಕಟ್ಟೆ ಕಳೆದ ಐದು ತಿಂಗಳ ಕನಿಷ್ಠ ಮಟ್ಟಕ್ಕೆ ಕುಸಿಯುವಂತೆ ಮಾಡಿದೆ. ಇನ್ನು ಡೌ ಜೋನ್ಸ್ ಕೈಗಾರಿಕಾ ಸರಾಸರಿ 725.81 ಅಂಕ ಅಥವಾ 2.1 ರಷ್ಟು ಕುಸಿದು 33,962.04ಕ್ಕೆ ತಲುಪಿದೆ. ನಾಸ್ಡಾಕ್ ಕಾಂಪೋಸಿಟ್ 152.25 ಅಂಕ ಅಥವಾ 1.1 ಶೇಕಡಾ ಇಳಿಕೆಯಾಗಿ 14,274.98 ಕ್ಕೆ ತಲುಪಿದೆ.
ಕೊರೊನಾ ಲಾಕ್ಡೌನ್ಗಳಿಂದ ಹೆಚ್ಚು ಹಾನಿಗೊಳಗಾದ ವಿಮಾನಯಾನ ಸಂಸ್ಥೆಗಳು ಮತ್ತು ಷೇರುಗಳು ಫೆಬ್ರವರಿ ಮತ್ತು ಮಾರ್ಚ್ 2020ರಲ್ಲಿ ಸಾಂಕ್ರಾಮಿಕ ರೋಗದ ಆರಂಭಿಕ ದಿನಗಳಲ್ಲಿ ಕೆಲವು ಭಾರಿ ನಷ್ಟಗಳನ್ನು ಅನುಭವಿಸಿದೆ. ಯುನೈಟೆಡ್ ಏರ್ಲೈನ್ಸ್ ಶೇಕಡಾ 5.5 ರಷ್ಟು ನಷ್ಟವನ್ನು ಅನುಭವಿಸಿದೆ. ಮಾಲ್ ಮಾಲೀಕ ಸೈಮನ್ ಪ್ರಾಪರ್ಟಿ ಗ್ರೂಪ್ ಶೇ 5.9 ಮತ್ತು ಕ್ರೂಸ್ ಆಪರೇಟರ್ ಕಾರ್ನಿವಲ್ ಶೇ 5.7 ರಷ್ಟು ಕುಸಿದಿದೆ. ಹಲವಾರು ಯುರೋಪಿಯನ್ ಮಾರುಕಟ್ಟೆಗಳು ಶೇಕಡಾ 2.5 ರಷ್ಟು ಕುಸಿತಗೊಂಡಿದೆ.
ಇದು ಜಾಗತಿಕ ಮಾರುಕಟ್ಟೆ ಕಥೆಯಾದರೆ ಮುಂಬೈ ಷೇರುಪೇಟೆಯಲ್ಲಿ 570ಕ್ಕೂ ಹೆಚ್ಚು ಅಂಕಗಳ ಕುಸಿತ ಕಂಡು ಬಂದಿದೆ. ಇನ್ನು ರಾಷ್ಟ್ರೀಯ ಷೇರು ಸಂವೇದಿ ಸೂಚ್ಯಂಕ ನಿಫ್ಟಿ ಕೂಡಾ 171 ಅಂಕ ಇಳಿಕೆ ದಾಖಲಿಸಿದೆ.
ಸತತವಾಗಿ ಏರಿಕೆ ದಾಖಲಿಸಿದ್ದ ಮುಂಬೈ ಷೇರು ಮಾರುಕಟ್ಟೆ ಜಾಗತಿಕ ಪೇಟೆಗಳಲ್ಲಾದ ತಲ್ಲಣಗಳಿಂದ ಕುಸಿತ ಕಂಡಿದೆ. ಇದು ಹೂಡಿಕೆದಾರರ ತಳಮಳಕ್ಕೆ ಕಾರಣವಾಗಿದೆ.