ಮಾಸ್ಕೋ: ಉಕ್ರೇನ್ ಮೇಲೆ ದಾಳಿ ಮಾಡಿದ್ದರ ವಿರುದ್ಧ ರಷ್ಯಾದ ಮೇಲೆ ಅಮೆರಿಕ ಆಸ್ತಿ ಮುಟ್ಟುಗೋಲು, ವ್ಯಾಪಾರ, ಬ್ಯಾಂಕ್ಗಳ ವಹಿವಾಟು, ಬಾಹ್ಯಾಕಾಶ ಕಾರ್ಯಕ್ರಮಗಳ ಮೇಲೆ ನಿರ್ಬಂಧ ಹೇರಿದೆ. ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿರುವ ರಷ್ಯಾ, ನಮ್ಮ ಮೇಲೆ ನಿರ್ಬಂಧ ಹೇರಿದರೆ 'ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರ'ದ ಗತಿಯೇನಾಗಲಿದೆ ಬಲ್ಲಿರಾ? ಎಂದು ತಂತ್ರಜ್ಞಾನದ ಬೆದರಿಕೆ ಹಾಕಿದೆ.
ಅಲ್ಲದೇ, ಇದನ್ನೇ ಮುಂದಿಟ್ಟುಕೊಂಡು ಭಾರತ ಮತ್ತು ಚೀನಾವನ್ನು ನಮ್ಮ ವಿರುದ್ಧ ಎತ್ತಿಕಟ್ಟಲು ಪ್ರಯತ್ನಿಸಿದರೆ, ಪರಿಣಾಮ ಭೀಕರವಾಗಿರುತ್ತದೆ ಎಂದು ಅಮೆರಿಕಕ್ಕೆ ರಷ್ಯಾದ ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ರಷ್ಯಾದ ವಿಜ್ಞಾನಿಯೊಬ್ಬರು, 'ನೀವು ನಮ್ಮ ಮೇಲೆ ನಿರ್ಬಂಧ ಹೇರಿದರೆ, ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರವನ್ನು ಯಾರು ಕಾಪಾಡುತ್ತಾರೆ?. ಅದು ನಮ್ಮ ಯಂತ್ರಗಳ ಸಹಾಯದಿಂದ ಕಾರ್ಯನಿರ್ವಹಿಸುತ್ತಿದೆ ಎಂಬುದನ್ನು ಮರೆಯಬೇಡಿ ಎಂದಿದ್ದಾರೆ.
ಅಲ್ಲದೇ, ಭಾರತ ಮತ್ತು ಚೀನಾವನ್ನು ಬಾಹ್ಯಾಕಾಶ ಯೋಜನೆಗಳ ಹೆಸರಲ್ಲಿ ನಮ್ಮ ವಿರುದ್ಧ ಎತ್ತಿಕಟ್ಟುವ ಪ್ರಯತ್ನ ಬೇಡ. ರಷ್ಯಾ ಇಲ್ಲದೇ ಐಎಸ್ಎಸ್ಗೆ ಅಸ್ತಿತ್ವ ಇರಲ್ಲ. ಏನಾದರೂ ಘಟಿಸಿದರೆ ಅದಕ್ಕೆ ನೀವೇ ಹೊಣೆ. ಅದಕ್ಕೆ ನೀವು ಸಿದ್ಧರಿದ್ದೀರಾ? ಎಂದು ಅಮೆರಿಕವನ್ನು ಉದ್ದೇಶಿಸಿ ಪ್ರಶ್ನಿಸಿದ್ದಾರೆ.
ಇದಕ್ಕೆ ಅಮೆರಿಕ ನೇರವಾಗಿ ಉತ್ತರಿಸಿಲ್ಲವಾದರೂ, ಕೆನಡಾ, ಜಪಾನ್ ಜೊತೆಗೂಡಿ ಐಎಸ್ಎಸ್ ಅನ್ನು ನಿಯಂತ್ರಿಸಲಾಗುವುದು ಎಂದು ಹೇಳಿದ್ದಾಗಿ ಅಲ್ಲಿನ ಜಾಲತಾಣ ಸ್ಪೇಸ್ ಡಾಟ್ಕಾಮ್ ವರದಿ ಮಾಡಿದೆ. ರಷ್ಯಾ, ಅಮೆರಿಕ, ಕೆನಡಾ, ಜಪಾನ್ ಸೇರಿದಂತೆ ಹಲವಾರು ಯುರೋಪಿಯನ್ ರಾಷ್ಟ್ರಗಳು ಅಂತಾರಾಷ್ಟ್ರೀಯ ಬಾಹ್ಯಾಕೇಶ ಕೇಂದ್ರ ಯೋಜನೆಯನ್ನು ರೂಪಿಸಿವೆ.
ಓದಿ: ದಾಂಪತ್ಯಕ್ಕಿಂತ ದೇಶ ದೊಡ್ಡದು.. ಮದುವೆಯಾದ ಮರುದಿನವೇ ಗನ್ ಹಿಡಿದು ಉಕ್ರೇನ್ ರಕ್ಷಣೆಗೆ ನಿಂತ ನವಜೋಡಿ!