ವಾಷಿಂಗ್ಟನ್(ಅಮೆರಿಕ): ಅಮೆರಿಕದ ದಕ್ಷಿಣ ಏಷ್ಯಾ ಹಾಗೂ ಕೇಂದ್ರ ಏಷ್ಯಾ ವ್ಯವಹಾರಗಳ ಸಹಾಯಕ ಪ್ರಧಾನ ಕಾರ್ಯದರ್ಶಿ ಅಲೈಸ್ ವೆಲ್ಸ್, ಇದೇ ತಿಂಗಳು 15ರಂದು ಭಾರತಕ್ಕೆ ಭೇಟಿ ನೀಡಲಿದ್ದು, ವಿವಿಧ ವಿಷಯಗಳ ಬಗ್ಗೆ ಅಧಿಕಾರಿಗಳೊಂದಿಗೆ ಸಂವಾದ ನಡೆಸಲಿದ್ದಾರೆ.
ವೆಲ್ಸ್, ಮೂರು ದಿನಗಳ ಕಾಲ ಭಾರತ ಪ್ರವಾಸದಲ್ಲಿ ಕೈಗೊಳ್ಳಲಿದ್ದು, 2019ರ ಯುಎಸ್ ಮತ್ತು ಭಾರತದ 2+2 ಸಂವಾದ(ಉಭಯ ದೇಶಗಳ ನಡುವಿನ ಮಾತುಕತೆ) ಯಶಸ್ಸಿನ ನಂತರ, ಇದೀಗ ಉಭಯ ದೇಶಗಳ ಕಾರ್ಯತಂತ್ರ ಮತ್ತು ಜಾಗತಿಕ ಸಹಭಾಗಿತ್ವವನ್ನು ಹೆಚ್ಚಿಸಲು ಭಾರತದ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿ ಚರ್ಚೆ ನಡೆಸಲಿದ್ದಾರೆ ಎಂದು ಅಮೆರಿಕ ವಿದೇಶಾಂಗ ಇಲಾಖೆ ಗುರುವಾರ ತಿಳಿಸಿದೆ.
ಡಿಸೆಂಬರ್ 18ರಂದು ಯುಎಸ್ ಸ್ಟೇಟ್ ಡಿಪಾರ್ಟ್ಮೆಂಟ್ 2+2 ಸಂವಾದವನ್ನು ಆಯೋಜಿಸಿದ್ದು, ಈ ಸಂವಾದದಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹಾಗೂ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕೆಲ್ ಪೊಂಪಿಯೊ ಮತ್ತು ರಕ್ಷಣಾ ಕಾರ್ಯದರ್ಶಿ ಮಾರ್ಕ್ ಎಸ್ಪರ್ ಪಾಲ್ಗೊಂಡಿದ್ದು, ಈ ಯಶಸ್ಸಿನ ನಂತರ ವೆಲ್ಸ್ ಇದೀಗ ಭಾರತಕ್ಕೆ ಆಗಮಿಸಲಿದ್ದಾರೆ.
ಅಲೈಸ್ ವೆಲ್ಸ್ ಜನವರಿ 13ರಿಂದಲೇ ಪ್ರವಾಸ ಕೈಗೊಳ್ಳಲಿದ್ದು, ಕೇವಲ ಭಾರತ ಮಾತ್ರವಲ್ಲದೇ ಶ್ರೀಲಂಕಾ, ಕೊಲೊಂಬೋ, ಇಸ್ಲಾಮಾಬಾದ್ ಹಾಗೂ ಪಾಕಿಸ್ತಾನಕ್ಕೆ ಭೇಟಿ ನೀಡಲಿದ್ದು ಅಲ್ಲಿನ ಸರ್ಕಾರದೊಂದಿಗೆ ವಿವಿಧ ವಿಷಯಗಳ ಬಗ್ಗೆ ಚರ್ಚೆ ನಡೆಸಿ ಜನವರಿ 22ರಂದು ಅಮೆರಿಕಗೆ ಹಿಂದಿರುಗಲಿದ್ದಾರೆ.