ನ್ಯೂಯಾರ್ಕ್: ಅಮೆರಿಕದ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದ ವಿಜ್ಞಾನಿಗಳು ಕೊರೊನಾ ಪ್ರಸರಣ ಕಡಿಮೆ ಮಾಡುವ ಚ್ಯುಯಿಂಗ್ ಗಮ್ ಅನ್ನು ಅಭಿವೃದ್ಧಿಪಡಿಸುತ್ತಿದ್ದಾರೆ. ಇದು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದರ ಬಗ್ಗೆ ಯೂನಿವರ್ಸಿಟಿಯ ಸಂಶೋಧಕ ಹೆನ್ರಿ ಡೇನಿಯಲ್ ಮಾಹಿತಿ ನೀಡಿದ್ದಾರೆ.
ಕೊರೊನಾ ವೈರಸ್ ನಮ್ಮ ಲಾಲಾರಸ ಗ್ರಂಥಿಗಳಲ್ಲಿ ಉಳಿದುಕೊಳ್ಳುತ್ತವೆ. ಹೀಗಾಗಿ ಯಾರಾದರೂ ಸೀನಿದಾಗ, ಕೆಮ್ಮಿದಾಗ ಅಥವಾ ಮಾತನಾಡಿದಾಗ ಹನಿಗಳ ಮೂಲಕ ಬಹಳ ಸುಲಭವಾಗಿ ಸೋಂಕು ಹರಡುತ್ತದೆ. ಈ ಚ್ಯುಯಿಂಗ್ ಗಮ್ ಅಗೆಯುವಾಗ ನಮ್ಮ ಎಂಜಲು ಅಥವಾ ಲಾಲಾರಸದಲ್ಲಿ ನಿಲ್ಲುವ ವೈರಸ್ ಅನ್ನು ತಟಸ್ಥಗೊಳಿಸಲು ಅವಕಾಶ ನೀಡುತ್ತದೆ. ಇದು ರೋಗ ಹರಡುವ ಮೂಲವನ್ನು ಕಟ್ಟಿಹಾಕುವುದರಿಂದ ಪ್ರಸರಣವನ್ನು ಸಂಭಾವ್ಯವಾಗಿ ತಗ್ಗಿಸುತ್ತದೆ. ಕೋವಿಡ್ ಸೋಂಕಿತರು ಇದನ್ನು ಹೆಚ್ಚು ಬಳಸುವುದರಿಂದ ವೈರಸ್ ಹರಡುವಿಕೆ ನಿಯಂತ್ರಿಸಬಹುದಾಗಿದೆ ಎನ್ನುತ್ತಾರೆ ಹೆನ್ರಿ ಡೇನಿಯಲ್.
ಇದನ್ನೂ ಓದಿ: ಪತ್ನಿ, ಇಬ್ಬರು ಮಕ್ಕಳನ್ನು ಕೊಂದು ಇದೆಲ್ಲ ಕೊರೊನಾ ಮುಕ್ತಿಗಾಗಿ ಎಂದ ಕಿಲ್ಲರ್ ವೈದ್ಯ..!
ಸಸ್ಯಗಳ ಪ್ರೋಟೀನ್ನಿಂದ ಈ ಚ್ಯುಯಿಂಗ್ ಗಮ್ ತಯಾರಿಸಲಾಗುತ್ತಿದೆ. ಮಾಲಿಕ್ಯುಲರ್ ಥೆರಪಿ ಎಂಬ ಜರ್ನಲ್ನಲ್ಲಿ ಇದರ ಬಗ್ಗೆ ನಡೆಸಿದ ಅಧ್ಯಯನದ ವರದಿ ಪ್ರಕಟವಾಗಿದೆ. ಸದ್ಯ ಸಂಶೋಧನಾ ತಂಡವು ತಮ್ಮ ಚ್ಯುಯಿಂಗ್ ಗಮ್ ವಿಧಾನವು ಸುರಕ್ಷಿತ ಮತ್ತು ಪರಿಣಾಮಕಾರಿ ಎಂದು ಹೇಳುತ್ತಿದ್ದು, ಸೋಂಕಿತರ ಮೇಲೆ ಕ್ಲಿನಿಕಲ್ ಪ್ರಯೋಗ ನಡೆಸಲು ಅನುಮತಿ ಪಡೆಯುವ ನಿರೀಕ್ಷೆಯಲ್ಲಿದೆ.
ಕೋವಿಡ್ ಸಾಂಕ್ರಾಮಿಕ ಆರಂಭದಲ್ಲಿ ಅಂದರೆ 2020ರ ಏಪ್ರಿಲ್ನಲ್ಲಿ ಹಿಮಾಚಲ ಪ್ರದೇಶ ಸರ್ಕಾರ ಚ್ಯುಯಿಂಗ್ ಗಮ್ ನಿಷೇಧ ಮಾಡಿತ್ತು. ಜನರು ಚ್ಯುಯಿಂಗ್ ಗಮ್ ಅಗೆದು ಎಲ್ಲೆಂದರಲ್ಲಿ ಉಗಿಯುವುದರಿಂದ ಕೊರೊನಾ ಮತ್ತಷ್ಟು ಜನರಿಗೆ ಹರಡಬಹುದು ಎಂಬ ಆತಂಕದಿಂದ ಮಾರಾಟ ಹಾಗೂ ಬಳಕೆಯನ್ನು ನಿಷೇಧಿಸಿತ್ತು.