ವಾಷಿಂಗ್ಟನ್ : ಈ ಬಾರಿಯ ಅಮೆರಿಕ ಅಧ್ಯಕ್ಷೀಯ ಚುನಾವಣೆ ಹಲವಾರು ಐತಿಹಾಸಿಕ ಘಟನೆಗಳಿಗೆ ಸಾಕ್ಷಿಯಾಗಿದೆ. ಇದೇ ಮೊದಲ ಬಾರಿ ತೃತೀಯ ಲಿಂಗಿಯೊಬ್ಬರು ಡೆಲೆವರ್ ಸ್ಟೇಟ್ ಚುನಾವಣೆಯಲ್ಲಿ ಜಯ ಸಾಧಿಸಿದ್ದಾರೆ.
ತೃತೀಯ ಲಿಂಗಿ ಹೋರಾಟಗಾರ್ತಿ ಸಾರಾ ಮೆಕ್ಬ್ರೈಡ್ ಚುನಾವಣೆಯಲ್ಲಿ ಗೆಲುವು ಸಾಧಿಸುವ ಮೂಲಕ ಅಮೆರಿಕ ಇತಿಹಾಸದಲ್ಲಿ ಮೊದಲ ಬಾರಿ ಸ್ಟೇಟ್ ಸೆನೆಟರ್ ಸ್ಥಾನಕ್ಕೆ ಆಯ್ಕೆಯಾದ ಮೊದಲ ತೃತೀಯ ಲಿಂಗಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.
30ರ ಹರೆಯದ ಸಾರಾ ಮೆಕ್ಬ್ರೈಡ್ ರಿಪಬ್ಲಿಕನ್ ಪಕ್ಷದ ಸ್ಟೀವ್ ವಾಷಿಂಗ್ಟನ್ರನ್ನು ಮಣಿಸಿ ಡೆಲವರ್ ಸ್ಟೇಟ್ ಫಸ್ಟ್ ಸೆನೆಟ್ ಡಿಸ್ಟ್ರಿಕ್ಟ್ ಪ್ರತಿನಿಧಿಸಲು ಆಯ್ಕೆಯಾಗಿದ್ದಾರೆ. ಸಾರಾ ಮೆಕ್ಬ್ರೈಡ್ ಡೆಲವೇರ್ನಲ್ಲಿ LGBTQ ಸಮುದಾಯದ ಹಕ್ಕುಗಳ ರಕ್ಷಣೆ ಹಾಗೂ ತಾರತಮ್ಯ ವಿರೋಧಿ ಕ್ರಮ ಕೈಗೊಳ್ಳಲು ಹೋರಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಅಲ್ಲದೇ 2016ರಲ್ಲಿ, ಫಿಲಡೆಲ್ಫಿಯಾದಲ್ಲಿ ನಡೆದ ಡೆಮಾಕ್ರಟಿಕ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಮೊದಲ ತೃತೀಯ ಲಿಂಗಿ ವ್ಯಕ್ತಿ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದ್ದರು. ಈ ಮೊದಲು ಅಮೆರಿಕಾದ ಮಾಜಿ ಅಧ್ಯಕ್ಷ ಬರಾಕ್ ಒಬಾಮರ ಆಡಳಿತ ಕಾಲದಲ್ಲಿ ಕೂಡ ಕೆಲಸ ಮಾಡಿರುವ ಸಾರಾ ಶ್ವೇತಭವನದಲ್ಲಿ ಕೆಲಸ ಮಾಡಿದ ಮೊದಲ ತೃತೀಯ ಲಿಂಗಿ ಮಹಿಳೆ ಎಂಬ ಪ್ರಶಂಸೆಗೆ ಪಾತ್ರವಾಗಿದ್ದರು.
ತಮ್ಮ ಈ ಗೆಲುವಿನ ಕುರಿತು ಟ್ವಿಟರ್ನಲ್ಲಿ ಬರೆದುಕೊಂಡಿರುವ ಸಾರಾ ಮೆಕ್ಬ್ರೈಡ್ "We did it. We won the general election. Thank you, thank you, thank you." ಎಂದು ಧನ್ಯವಾದ ತಿಳಿಸಿದ್ದಾರೆ.