ವಾಷಿಂಗ್ಟನ್ : ಶಾಂತಿಯುತವಾಗಿ ಪ್ರತಿಭಟಿಸುವ ತಮ್ಮ ದೇಶದ ಜನರ ಹಕ್ಕನ್ನು ಗೌರವಿಸುವಂತೆ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊಗೆ ಅಮೆರಿಕ ಮೂಲದ ಹಿಂದೂ ಸಂಘಟನೆಯೊಂದು ಒತ್ತಾಯಿಸಿದೆ.
'ಯಾವುದೇ ಪ್ರಜಾಪ್ರಭುತ್ವದಲ್ಲಿ ಶಾಂತಿಯುತ ಪ್ರತಿಭಟನೆಯ ಹಕ್ಕು ಮೂಲಭೂತವಾಗಿದೆ. ಪ್ರತಿಭಟನೆಯನ್ನು ಹತ್ತಿಕ್ಕಲು ತುರ್ತು ಪರಿಸ್ಥಿತಿಯನ್ನು ಘೋಷಿಸುವುದು ಕೆನಡಾದಲ್ಲಿ ಮೊದಲ ಬಾರಿಗೆ ದುರಂತ ನಿದರ್ಶನ'ವಾಗಿದೆ ಎಂದು ಅದು ಹೇಳಿದೆ.
ಕೆನಡಾದಲ್ಲಿ ಕೋವಿಡ್ ಲಸಿಕೆ ಕಡ್ಡಾಯದ ನಿಯಮವನ್ನು ವಿರೋಧಿಸಿ ಟ್ರಕ್ ಚಾಲಕರ ನೇತೃತ್ವದಲ್ಲಿ ನಡೆಯುತ್ತಿರುವ ಪ್ರತಿಭಟನೆ ಮೂರನೇ ವಾರಕ್ಕೆ ಕಾಲಿಟ್ಟಿದೆ. ಇದರಿಂದ ಸರಕುಗಳ ಸಾಗಾಟಕ್ಕೆ ಭಾರಿ ಹೊಡೆತ ಬಿದ್ದಿದೆ. ಪ್ರತಿಭಟನೆ ಹತ್ತಿಕ್ಕಲು ಪ್ರಧಾನಿ ಜಸ್ಟಿನ್ ಟ್ರುಡೋ ಅವರು ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಣೆ ಮಾಡಿದ್ದಾರೆ.
ಕೆನಡಾ ಮತ್ತು ಅಮೆರಿಕ ನಡುವೆ ಸಂಪರ್ಕ ಸಾಧಿಸುವ ಪ್ರಮುಖ ಗಡಿ ವ್ಯಾಪಾರ ಮಾರ್ಗಗಳು ಸೇರಿದಂತೆ ಅನೇಕ ಕಡೆ ಸೇರಿರುವ ಪ್ರತಿಭಟನಾಕಾರರನ್ನು ಚೆದುರಿಸಲು ಕೆನಡಾ ಸರ್ಕಾರ ಕಾನೂನಿನ ಪ್ರಬಲ ಅಸ್ತ್ರವನ್ನು ಪ್ರಯೋಗಿಸಿದೆ. ಜತೆಗೆ ಪ್ರತಿಭಟನೆಗೆ ಸಂಬಂಧಿಸಿದಂತಹ ವ್ಯಕ್ತಿಗಳು ಅಥವಾ ಸಂಘಟನೆಗಳ ಖಾತೆಗಳನ್ನು ಮುಟ್ಟುಗೋಲು ಹಾಕುವಂತೆ ಹಣಕಾಸು ಸಂಸ್ಥೆಗಳಿಗೆ ಅಧಿಕಾರ ನೀಡಿದೆ.
ಇದನ್ನೂ ಓದಿ: ಟ್ರಕ್ ಚಾಲಕರ ಭಾರಿ ಪ್ರತಿಭಟನೆ: 50 ವರ್ಷದಲ್ಲೇ ಮೊದಲ ಬಾರಿಗೆ ತುರ್ತು ಅಧಿಕಾರ ಬಳಸಿದ ಕೆನಡಾ ಪ್ರಧಾನಿ